ಸಾರಾಂಶ
ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ 2023-24ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಬಂದಂತ 1ಕೋಟಿ ಅನುದಾನದಲ್ಲಿ ಮಾದಿಗ ಸಮಾಜವನ್ನು ಶಾಸಕರು ಕಡೆಗಣಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾಧ್ಯಕ್ಷ ಎಂ.ಎಂ. ಆನಂದ ಆರೋಪಿಸಿದರು.
ರಟ್ಟೀಹಳ್ಳಿ: ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ 2023-24ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಬಂದಂತ 1ಕೋಟಿ ಅನುದಾನದಲ್ಲಿ ಮಾದಿಗ ಸಮಾಜವನ್ನು ಶಾಸಕರು ಕಡೆಗಣಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾಧ್ಯಕ್ಷ ಎಂ.ಎಂ. ಆನಂದ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮಾಜ 35 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದ್ದು, ಆದರೂ ನಮ್ಮ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇತರೆ ಎಸ್ಸಿ ಜನಾಂಗ ಇರುವ ಕಾಲೋನಿಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಬಂದಂತ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡದೆ ತಾರತಮ್ಯ ಮಾಡಿರುವುದು ಖಂಡನೀಯ. ಕಾರಣ ತಕ್ಷಣ ಮಾದಿಗ ಸಮಾಜವನ್ನು ಪರಿಗಣಿಸಿ ಹೆಚ್ಚು ಸಂಖ್ಯೆಯಲ್ಲಿ ಸಮಾಜ ಬಾಂಧವರು ವಾಸಿಸುವಂತ ಕಾಲೋನಿಗಳನ್ನು ಅಭಿವೃದ್ಧಿಪಡಿಸಿ ಹಾಗೂ ಬಂದಂತ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರ ಮನೆ ಮುಂದೆ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು 15 ಸಾವಿರಕ್ಕೂ ಹೆಚ್ಚು ಮತ ಪಡೆದು ಶಾಸಕರಾಗಿದ್ದು, ಅವರ ಗೆಲುವಿಗೆ ಮಾದಿಗ ಸಮಾಜದವರ ಕೊಡುಗೆ ಅಪಾರವಾಗಿದೆ. ಆದರೂ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕಾರಣ ತಕ್ಷಣವೇ ಆದ ಅನ್ಯಾಯವನ್ನು ಸರಿಪಡಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡ ಹನಮಂತಪ್ಪ ಗಾಜೇರ ಮಾತನಾಡಿ, ಅವಳಿ ತಾಲೂಕಿನಲ್ಲಿ ಮಾದಿಗ ಜನಾಂಗ ಹೆಚ್ಚಾಗಿದ್ದು, ಆದರೆ ಶಾಸಕ ಯು.ಬಿ. ಬಣಕಾರ ಅವರು ನಮ್ಮ ಜನಾಂಗ ವಾಸಿಸುವಂತ ಕಾಲೋನಿಗಳ ಅಭಿವೃದ್ಧಿಗೆ ಹಣ ಹಂಚಿಕೆ ಮಾಡದೆ ಇತರೆ ಎಸ್ಸಿ ಜನಾಂಗ ಇರುವಂತ ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 10 ಲಕ್ಷದಂತೆ 50 ಲಕ್ಷ ಅನುದಾನವನ್ನು ಹಂಚಿಕೆ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಉಗ್ರವಾಗಿ ಖಂಡಿಸುತ್ತದೆ. ಆದ್ದರಿಂದ ಆದ ತಪ್ಪನ್ನು ಸರಿಪಡಿಸಿ ಮಾದಿಗ ಸಮಾಜ ಹೆಚ್ಚಿರುವ ಗ್ರಾಮಗಳನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಕುಮಾರ ದ್ಯಾವಣ್ಣನವರ, ನಾಗರಾಜ ನಡುವಿನ ಮನಿ, ಸಂತೋಷ ಹರಿಜನ ಮುಂತಾದವರು ಇದ್ದರು.