ಸಾರಾಂಶ
ರಾಮನಗರ: ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆಗೆ ನಿರ್ಬಂಧ ಹೇರಿರುವ ಆದೇಶವನ್ನು ಜಿಲ್ಲಾಧಿಕಾರಿಗಳು 24ಗಂಟೆಯೊಳಗೆ ಹಿಂಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸೆ.9ರಂದು ಕನ್ನಡ, ದಲಿತ, ರೈತ ಸೇರಿದಂತೆ ಹಲವು ಸಂಘಟನೆಗಳು ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಎಂಬುದು ಸಂವಿಧಾನ ನೀಡಿರುವ ಹಕ್ಕಾಗಿದೆ. ಈ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲು ಜಿಲ್ಲಾಡಳಿತ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ರಾಮನಗರ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಗೆ ನಿರ್ಬಂಧ ವಿಧಿಸಲಾಗಿದೆ. ಉಳಿದ 29 ಜಿಲ್ಲೆಗಳಲ್ಲಿ ಈ ನಿರ್ಬಂಧ ವಿಧಿಸಲಾಗಿಲ್ಲ ಏಕೆಂದು ಪ್ರಶ್ನಿಸಿದರು.
ಸಂಘಟನೆಗಳ ಪ್ರತಿಭಟನೆಯನ್ನು ಮೊಟಕುಗೊಳಿಸುವ ಸಲುವಾಗಿಯೇ ಜಿಲ್ಲಾಡಳಿತ ಈ ರೀತಿಯ ಕ್ರಮ ಕೈಗೊಂಡಿದೆ. ಇದು ಭಾಷಾ ಹಾಗೂ ಹೋರಾಟಗಾರರ ವಿರೋಧಿ ಜಿಲ್ಲಾಡಳಿತ ಎಂಬುದನ್ನು ಸಾಬೀತು ಮಾಡುತ್ತದೆ. ಜಿಲ್ಲಾಧಿಕಾರಿಗೆ ಜನಪರ ಕಾಳಜಿ ಇರಬೇಕೇ ಹೊರತು ಸರ್ಕಾರದ ಹಾಗೂ ಒಂದು ಪಕ್ಷದ ಕೈಗೊಂಬೆಯಾಗಿ ವರ್ತಿಸಬಾರದು ಎಂದರು.ರೈತ ಸಂಘಟನೆಯ ಮುಖಂಡ ಮಲ್ಲಯ್ಯ ಮಾತನಾಡಿ, ಅಧಿಕಾರಿಗಳು ಸರ್ವಾಧಿಕಾರಿಗಳಾದರೆ ಏನೆಲ್ಲಾ ಆದೇಶ ಹೊರ ಬೀಳಲಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ರಾಮನಗರ ಜಿಲ್ಲೆಯು ಹೋರಾಟಗಾರರಿಗೆ ಜನ್ಮ ನೀಡಿದೆ. ರೈತ ಸಂಘವೂ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿ ನ್ಯಾಯ ದೊರಕಿಸಿಕೊಟ್ಟಿದೆ. ಹೋರಾಟವೂ ರೈತ ಸಂಘಟನೆಯ ಸಿದ್ಧ ಹಕ್ಕಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಿಕೊಟ್ಟರೆ, ಹೋರಾಟಗಳು ನಡೆಯುವುದೇ ಇಲ್ಲ. ಸಮಸ್ಯೆ ಇದ್ದ ಕಾರಣ ಹೋರಾಟಗಾರರು ಹೋರಾಟ ನಡೆಸಿಯೇ ನ್ಯಾಯ ಪಡೆದುಕೊಂಡಿದ್ದಾರೆ. ಇನ್ನು ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ತಾಲೂಕು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಸರ್ವಾಧಿಕಾರಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದರು.ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣದ ಜಿಲ್ಲಾಧ್ಯಕ್ಷ ರಾಜು ಎಂಎನ್ಆರ್ ಮಾತನಾಡಿ, ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುತ್ತಿರುವ ಜಿಲ್ಲಾಡಳಿತದ ನಿರ್ಧಾರವು 78 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರ ಪ್ರತಿಭಟನೆ ನಡೆಸದಂತೆ ಹೊರಡಿಸಿದ್ದ ಆದೇಶದ ಮಾದರಿಯಾಗಿದೆ. ನಮ್ಮ ಹಕ್ಕು ಕೇಳಲು ನಾವೂ ಹೋರಾಟ ನಡೆಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿಯು ಭ್ರಷ್ಟಾಚಾರದಿಂದ ಕೂಡಿದೆ. ನಿವೃತ್ತ ಶಿಕ್ಷಕರೊಬ್ಬರು ತಮ್ಮ ಪಿಂಚಣಿ ಹಣ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿ ಎಂದು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡ ಪರ ಹೋರಾಟಗಾರರದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶಿವುಗೌಡ, ವಿವಿಧ ಸಂಘಟನೆಯ ಮುಖಂಡರಾದ ನರಸಿಂಹಮೂರ್ತಿ, ಚೀಲೂರು ಮುನಿರಾಜು, ಜಯಕುಮಾರ್, ಕೆಂಪರಾಜು ಮತ್ತಿತರರು ಇದ್ದರು.
24ಗಂಟೆಯೊಳಗೆ ತಮ್ಮ ಆದೇಶ ವಾಪಸ್ಸು ಪಡೆಯದಿದ್ದರೆ ಸೆ.9ರಂದು ಬೃಹತ್ ಪ್ರತಿಭಟನೆಯನ್ನು ಡಿಸಿ ಕಚೇರಿ ಆವರಣದಲ್ಲಿ ನಡೆಸುತ್ತೇವೆ. ಒಂದೊಮ್ಮೆ ಇದಕ್ಕೆ ಅವಕಾಶ ನೀಡದಿದ್ದರೆ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ.ಮಲ್ಲಯ್ಯ, ರೈತ ಸಂಘಟನೆಯ ಮುಖಂಡ