ವೀರಶೈವ ಲಿಂಗಾಯಿತ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ

| Published : Aug 28 2024, 12:45 AM IST

ವೀರಶೈವ ಲಿಂಗಾಯಿತ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ವೀರಶೈವ ಚಳವಳಿಯ ನಾಯಕರಾಗಿ ವರ್ಣಾಶ್ರಮದ ವಿರುದ್ಧ ತಿರುಗಿಬಿದ್ದು, ಧರ್ಮದ ಪ್ರತಿಯೊಂದು ಅಂಶಗಳನ್ನೂ ಯೋಚಿಸಿ ಕಾರ್ಯಗತಗೊಳಿಸಿ ಶಿವಾನುಭವ ಮಂಟಪದ ಮೂಲಕ ಸಮಾಜದ ಮಾರ್ಗಸೂಚಿಗಳನ್ನು ನೀಡಿದ ಧರ್ಮದಲ್ಲಿ ಜನಿಸಿದ ನಾವೇ ಪುಣ್ಯವಂತರಾಗಿದ್ದೇವೆ ಎಂದು ಶ್ರೀಕ್ಷೇತ್ರ ಮರಳೇಗವಿ ಮಠದ ಮುಮ್ಮಡಿ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು.

ಕನಕಪುರ: ಬಸವಣ್ಣನವರು ವೀರಶೈವ ಚಳವಳಿಯ ನಾಯಕರಾಗಿ ವರ್ಣಾಶ್ರಮದ ವಿರುದ್ಧ ತಿರುಗಿಬಿದ್ದು, ಧರ್ಮದ ಪ್ರತಿಯೊಂದು ಅಂಶಗಳನ್ನೂ ಯೋಚಿಸಿ ಕಾರ್ಯಗತಗೊಳಿಸಿ ಶಿವಾನುಭವ ಮಂಟಪದ ಮೂಲಕ ಸಮಾಜದ ಮಾರ್ಗಸೂಚಿಗಳನ್ನು ನೀಡಿದ ಧರ್ಮದಲ್ಲಿ ಜನಿಸಿದ ನಾವೇ ಪುಣ್ಯವಂತರಾಗಿದ್ದೇವೆ ಎಂದು ಶ್ರೀಕ್ಷೇತ್ರ ಮರಳೇಗವಿ ಮಠದ ಮುಮ್ಮಡಿ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು.

ನಗರದ ದೇಗುಲಮಠದ ಆವರಣದಲ್ಲಿ ಅಖಿಲಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ವೀರಶೈವ ಲಿಂಗಾಯಿತ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿದಾಗ ಸಂಘಟನೆಗೆ ಶಕ್ತಿ ಮತ್ತು ಬಲವಿರುತ್ತದೆ. ವೀರಶೈವ ಮತ್ತು ಲಿಂಗಾಯಿತ ಸಮಾಜ ಒಗ್ಗೂಡಿ ಕೆಲಸ ಮಾಡಿದಾಗ ಸಮಾಜದ ಸರ್ವರಲ್ಲೂ ಸದಾಶಯವನ್ನು ಕಂಡರೆ ಆಗ ಬಸವಣ್ಣನವರು ಕಂಡ ಕನಸಿಗೆ ಪೂರಕವಾಗಿ ನಡೆದು ಕೊಂಡಂತಾಗುತ್ತದೆ ಲಿಂಗಾಯಿತ ಧರ್ಮಲ್ಲಿರುವ ವಿಶಿಷ್ಟ ಸಂಸ್ಕಾರವು ವಿಶ್ವದ ಯಾವುದೇ ಧರ್ಮ, ಮತ, ಪಂಥದಲ್ಲಿ ಇಲ್ಲ. ಇಂತಹ ವಿಶ್ವಧರ್ಮವನ್ನು ಗಟ್ಟಿಯಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ , ತಾಲೂಕಿನಲ್ಲಿ ಸಮಾಜದ ಚುನಾವಣೆ ಬಂದಾಗ ಎಲ್ಲರೂ ಸೌಹಾರ್ದತೆಯಿಂದ ಕೂಡಿ ಅವಿರೋಧವಾಗಿ ಆಯ್ಕೆ ಮಾಡಿ ಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಲ್ಲರ ವಿಶ್ವಾಸ ಪಡೆದು ನಿಭಾಯಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ವೀರಶೈವ ಹಾಗೂ ಲಿಂಗಾಯಿತ ಸಮಾಜಗಳು ಬೇರೆ ಬೇರೆಯಲ್ಲ. ಅವೆರೆಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ವೀರಶೈವ ಸಮಾಜದ ಅಭಿವೃದ್ಧಿಗೆ ಸಮಾಜದ ಬಾಂಧವರು ತಮ್ಮ ಆದಾಯದಲ್ಲಿ ಶೇ.೧ರಷ್ಟು ನೆರವು ನೀಡುವ ಅಗತ್ಯವಿದೆ ಎಂದರು.

ತಮ್ಮ ಮಕ್ಕಳನ್ನು ಕನಿಷ್ಠ ಪಕ್ಷ ಪಿಯುಸಿವರೆಗಾದರೂ ಕಡ್ಡಾಯವಾಗಿ ಓದಿಸಲೇಬೇಕು. ಅದಕ್ಕೆ ಅಡ್ಡಿ ಉಂಟಾಗುವ ಬಡವರಿಗೆ ಮಹಸಭಾ ತಮ್ಮ ನೆರವಿಗೆ ನಿಲ್ಲುತ್ತದೆ. ತಮಿಳುನಾಡಿನ ಹೊಗೆನಿಕಲ್‌ನಿಂದ ರಾಜ್ಯದ ಗಡಿ ಬೀದರ್ ಜಿಲ್ಲೆ ಯವರೆಗೂ ಸಂಘಟನೆ ಆಶಾದಾಯಕವಾಗಿ ಮೂಡಿಬರಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಸಮುದಾಯ ದ ಅಭಿವೃದ್ಧಿಗೆ ಬಲ ತುಂಬಬೇಕಿದೆ ಎಂದು ಮನವಿ ಮಾಡಿದರು.

ತಾಲೂಕು ಘಟಕದ ನೂತನ ಅಧ್ಯಕ್ಷ ಮರಳವಾಡಿ ಉಮಾಶಂಕರ್ ಮಾತನಾಡಿದರು.

ದೇಗುಲಮಠದ ಪೀಠಾಧ್ಯಕ್ಷರಾದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಜ್ಜಬಸವನಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಲ್ವಪತ್ರ ಮಠದ ಶಿವಲಿಂಗ ಸ್ವಾಮೀಜಿ, ತೋಟಹಳ್ಳಿ ಶ್ರೀ ಬಸವಪ್ರಭು ಸ್ವಾಮೀಜಿ, ಕೋಡಿಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾತನೂರು ನಿಜಗುಣ ಸ್ವಾಮೀಜಿ, ಹೊರಳಗಲ್ಲುಹಿಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ಸಂಘದ ನಿಕಟಪೂರ್ವ ಅಧ್ಯಕ್ಷ ಸಾಂಬಶಿವ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಆನೇಕಲ್ ವೀರಶೈವ ಸಮಾಜದ ಅಧ್ಯಕ್ಷ ಇನ್ನಕ್ಕಿ ಜಯಣ್ಣ ಚನ್ನಪಟ್ಟಣ ಅಧ್ಯಕ್ಷ ಶಿವಮಾದಯ್ಯ ಸೇರಿದಂತೆ ಅನೇಕ ಸ್ವಾಮೀಜಿಗಳು, ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.