ಸಾರಾಂಶ
ಬಾಲ್ಯ ವಿವಾಹವನ್ನು 2006ರಲ್ಲಿ ನಿಷೇಧ ಮಾಡಿ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆಯನ್ನು ಸರ್ವರೂ ಪಾಲಿಸಬೇಕು.
ಹರಪನಹಳ್ಳಿ: ಬಾಲ್ಯ ವಿವಾಹವನ್ನು 2006ರಲ್ಲಿ ನಿಷೇಧ ಮಾಡಿ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆಯನ್ನು ಸರ್ವರೂ ಪಾಲಿಸಬೇಕು ಎಂದು ಇಲ್ಲಿಯ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೆ.ಬಿ.ಜಿ. ಪ್ರೌಢಶಾಲೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ 2012 ಹಾಗೂ ಬಾಲ್ಯವಿವಾಹ ನಿಷೇಧ ಕಾಯಿದೆ 2006 ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಿದಾಗ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುವುದಕ್ಕೆ ಸಾಧ್ಯ.ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಾಲ್ಯವಿವಾಹ ಆಗಿ ನಿಮ್ಮ ಮುಂದಿನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಕಾನೂನಿನ ಚೌಕಟ್ಟಿನಲ್ಲಿ ವಿವಾಹ ಆಗುವುದು ಉತ್ತಮ. ಅಸಭ್ಯವಾಗಿ ವರ್ತಿಸುವುದು, ಮಾತನಾಡುವುದು, ನೋಡುವುದೂ ಸಹ ಲೈಂಗಿಕ ಅಪರಾಧ ಎಂದು ಹೇಳಿದರು.ವಕೀಲ ಎಂ. ಮೃತ್ಯುಂಜಯ ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ಚಟುವಟಿಕೆ ದೌರ್ಜನ್ಯ ನಡೆಯುತ್ತಲೇ ಇದೆ. ಇಂತಹ ಕೃತ್ಯ ತಡೆಗಟ್ಟಲು ಭಾರತದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ವಕೀಲ ಕೆ. ಸಣ್ಣನಿಂಗನಗೌಡ ಮಾತನಾಡಿ, ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ನಡೆದಾಗ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುವುದು ಎಲ್ಲರ ಆದ್ಯತೆಯಾಗಿದೆ. ಹುಟ್ಟಿನಿಂದ ಸಾಯುವ ವರೆಗೂ ಕಾನೂನಿನ ಚೌಕಟ್ಟಿನಲ್ಲಿ ನಡೆದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆ.ಬಿ.ಜಿ. ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಿ. ಸಿದ್ದಪ್ಪ, ಕೆ.ಬಿ.ಜಿ. ಪ್ರೌಢಶಾಲೆಯ ಮುಖ್ಯಶಿಕ್ಷಕ ಶಂಕರ್ ಮೂರ್ತಿ ಮಾತನಾಡಿದರು. ವಕೀಲರಾದ ಎಂ. ಮೃತ್ಯುಂಜಯ, ಕೆ. ಸಣ್ಣನಿಂಗನಗೌಡ, ಬಿ. ತಿಪ್ಪೇಶ್, ನಾಗರಾಜ್ ನಾಯ್ಕ ಸಿ., ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿ, ಬಸವರಾಜ್, ಮತ್ತು ಶಾಲೆಯ, ವಿದ್ಯಾರ್ಥಿಗಳು ಹಾಜರಿದ್ದರು.