ಸಾರಾಂಶ
- ಅಥಣಿ ಕಾಲೇಜಿನ ಆವರಣದಲ್ಲಿ ಆಯೋಜನೆ: ದೀಪಾ ರಾವ್ - - - ದಾವಣಗೆರೆ: ವಿನಾಯಕ ಎಜುಕೇಶನ್ ಟ್ರಸ್ಟ್ ಅಥಣಿ ಹಾಗೂ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಹಾಗೂ ಚಿರಂತನ ಅಕಾಡೆಮಿ ಆಶ್ರಯದಲ್ಲಿ ದಾವಣಗೆರೆಯ ಸಂಗೀತ ನೃತ್ಯ ಪ್ರತಿಭೆಗಳಿಗೆ ಫೆ.26ರ ಮಹಾಶಿವರಾತ್ರಿಯಂದು ನಗರದ ಅಥಣಿ ಕಾಲೇಜಿನ ಆವರಣದಲ್ಲಿ ನಡೆಯುವ ಶಿವರಾತ್ರಿ ಉತ್ಸವದಲ್ಲಿ ವೇದಿಕೆಯ ಅವಕಾಶ ದೊರೆಯಲಿದೆ ಎಂದು ಚಿರಂತನ ಸಂಸ್ಥೆ ಅಧ್ಯಕ್ಷೆ ದೀಪಾ ಎನ್. ರಾವ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಭಕ್ತಿನೃತ್ಯ, ಭರತನಾಟ್ಯ, ವೇಷಭೂಷಣ ಸ್ಪರ್ಧೆ, ಶ್ಲೋಕ ಹಾಗೂ ವಚನ ಪಠಣಕ್ಕೆ ವಿವಿಧ ವಿಭಾಗಗಳಲ್ಲಿ ಆನ್‌ಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು. 180ಕ್ಕೂ ಹೆಚ್ಚು ಆಡಿಷನ್ ವಿಡಿಯೋಗಳು ಬಂದಿದ್ದವು. ಹಿರಿಯರಾದ ಡಾ. ಬಿ.ಟಿ. ಅಚ್ಯುತ್, ಡಾನ್ಸ್ ಮಾಸ್ಟರ್ ಅಭಿಷೇಕ್ ಮಠದ್ ಹಾಗೂ ಮೈಸೂರಿನ ಗುರು ಸೌಮ್ಮ ರಾಣಿ ತೀರ್ಪುಗಾರರಾಗಿ 40ಕ್ಕೂ ಹೆಚ್ಚು ಕಲಾವಿದರು ಮತ್ತು ಕಲಾತಂಡಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.3 ವರ್ಷದ ಮಕ್ಕಳಿಂದ ಹಿಡಿದು 74 ವರ್ಷದವರೆಗಿನ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಫೆ.26ರಂದು ಎಸ್.ಎಸ್. ಲೇಔಟ್ ಅಥಣಿ ಕಾಲೇಜಿನಲ್ಲಿರುವ ಶಿವನ ಮೂರ್ತಿಯ ಶಾಂತ ವಾತಾವರಣದಲ್ಲಿ ಸಂಜೆ 7.30 ರಿಂದ ರಾತ್ರಿ 11.30 ವರೆಗೆ ಸತತವಾಗಿ ಶಿವಭಕ್ತಿಯನ್ನು ಬಿಂಬಿಸುವ ಹಲವು ಕಲಾ ಪ್ರದರ್ಶನಗಳು ಮೂಡಿಬರಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಅಥಣಿ ಎಸ್.ವೀರಣ್ಣ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ ಆಗಮಿಸಲಿದ್ದಾರೆ. ಚಿರಂತನ ತಂಡ ಹಾಗೂ ಇತರ ತಂಡಗಳಿಂದ ವಿಶೇಷ ನೃತ್ಯ ಪ್ರದರ್ಶನಗಳು ನಡೆಯಲಿವೆ. 100ಕ್ಕೂ ಹೆಚ್ಚು ಪ್ರತಿಭೆಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ನೀಡಲಾಗುವುದು. ಎಲ್ಲ ಕಲಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ರಕ್ಷಾ ರಾಜಶೇಖರ, ಎಸ್‌ಬಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಷಣ್ಮುಖಪ್ಪ, ಬಿಎಸ್‌ಸಿ ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಗುರು, ಬಿ.ವೆಂಕಟೇಶ್ ಇದ್ದರು.
- - - -25ಕೆಡಿವಿಜಿ40.ಜೆಪಿಜಿ:ದಾವಣಗೆರೆಯಲ್ಲಿ ಚಿರಂತನದಿಂದ ಶಿವರಾತ್ರಿ ಅಂಗವಾಗಿ ಅಥಣಿ ಕಾಲೇಜಿನಲ್ಲಿ ಶಿವಭಕ್ತಿಯನ್ನು ಬಿಂಬಿಸುವ ಕಲಾ ಪ್ರದರ್ಶನ ಆಯೋಜಿಸಿರುವ ಕುರಿತು ದೀಪಾ ಎನ್. ರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.