ವಿಜಯ ಪ್ರಕಾಶ್ ತಂಡದ ಸಂಗೀತಕ್ಕೆ ಮಾರುಹೋದ ಪ್ರೇಕ್ಷಕರು

| Published : Feb 26 2025, 01:01 AM IST

ಸಾರಾಂಶ

ರನ್ನ ವೈಭವ ಅಂಗವಾಗಿ ಸೋಮವಾರ ಸಂಜೆ ನಗರದ ರನ್ನ ಕ್ರೀಡಾಂಗಣದ ಚಾವುಂಡರಾಯ ಮುಖ್ಯ ವೇದಿಕೆಯಲ್ಲಿ ಖ್ಯಾತ ಸಂಗೀತ ನೀರ್ದೇಶಕ, ಗಾಯಕ ವಿಜಯ ಪ್ರಕಾಶ್ ಹಾಗೂ ತಂಡದವರು ಕನ್ನಡದ ಪ್ರಸಿದ್ಧ ಚಲನಚಿತ್ರ ಗೀತೆ ಹಾಡಿ ಜನಮನ ರಂಜಿಸಿದರು,

ಕನ್ನಡಪ್ರಭ ವಾರ್ತೆ ಮುಧೋಳ

ರನ್ನ ವೈಭವ ಅಂಗವಾಗಿ ಸೋಮವಾರ ಸಂಜೆ ನಗರದ ರನ್ನ ಕ್ರೀಡಾಂಗಣದ ಚಾವುಂಡರಾಯ ಮುಖ್ಯ ವೇದಿಕೆಯಲ್ಲಿ ಖ್ಯಾತ ಸಂಗೀತ ನೀರ್ದೇಶಕ, ಗಾಯಕ ವಿಜಯ ಪ್ರಕಾಶ್ ಹಾಗೂ ತಂಡದವರು ಕನ್ನಡದ ಪ್ರಸಿದ್ಧ ಚಲನಚಿತ್ರ ಗೀತೆ ಹಾಡಿ ಜನಮನ ರಂಜಿಸಿದರು,

ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಅನುಪಮಾ ಭಟ್ ಅವರ ಇಂಪಾದ ಗಾಯನ ಕೇಳಿದ ಜನರು ಸಂತಸಗೊಂಡರು. ಖ್ಯಾತ ಚಿತ್ರನಟಿ ರಚಿತಾ ರಾಮ್ ವೇದಿಕೆಗೆ ಬಂದಾಗ ಪ್ರೇಕ್ಷಕರು ಜೈಕಾರ ಹಾಕಿ ಸಂಭ್ರಮಿಸಿದರು, ನಿರೂಪಕಿ ಅನುಶ್ರಿ ಅವರ ಮಾತಿನ ಮೋಡಿಗೆ ಜನರು ಮನಸೋತರು.

ವಿಜಯ ಪ್ರಕಾಶ್ ತಂಡದವರು ಹಾಡುವಾಗ ಪ್ರೇಕ್ಷಕರು ಕೂಡ ಹೆಜ್ಜೆ ಹಾಕಿದರು, ಸಮಯದ ಪ್ರಜ್ಞೆಯನ್ನೇ ಮರೆತು ಸಂಗೀತ ಲೋಕದಲ್ಲಿ ಮುಳಗಿ ಹೋಗಿದ್ದರು.

ಮಾಳು ನಿಪನಾಳ ಅವರ ಜನಪದ ಗೀತೆಗಳು ಜನಮನ ಗೆದ್ದವು, ಆರ್.ಜೆ. ರಶೀದ್ ಅವರ ನಿರೂಪಣೆ ಶೈಲಿ ಮೆಚ್ಚುಗೆಗೆ ಪಾತ್ರವಾಯಿತು. ಲೋಕಾಪೂರದ ನಟರಾಜ ಹವ್ಯಾಸಿ ಕಲಾ ತಂಡದವರು ರನ್ನನ ಗದಾಯುದ್ದ ನಾಟಕ ಪ್ರದರ್ಶಿಸಿದರು, ಬಾಗಲಕೋಟೆ ಶ್ರೇಯಾ ಕುಲಕರ್ಣಿ ಹಾಗೂ ಮುಧೋಳದ ಡಾ.ದಿಷಾ ಉದಯ ಶೆಟ್ಟಿ ಅವರ ಭರತ ನಾಟ್ಯ, ಹಳಿಯಾಳದ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯವರು ಸೂತ್ರದ ಬೊಂಬೆಯಾಟ ಪ್ರದರ್ಶಿಸಿದರು.

ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಬಸವರಾಜ ಸಿಂದಗಿಮಠ ಅವರ ಜನಪದ ಸಂಗೀತ, ಜಮಖಂಡಿಯ ಪುಂಡಲೀಕ ಭಜಂತ್ರಿ ಅವರ ಜುಗಲಬಂದಿ, ಜಯನಗರದ ಅಕ್ಷತಾ ಆರ್.ಕೆ. ಸಮೂಹ ನೃತ್ಯ, ಎಂ.ಕೆ. ಹುಬ್ಬಳಿಯ ಡಾ.ಎಸ್. ಬಾಳೇಶ ಭಜಂತ್ರಿ ಅವರ ಶಹನಾಯಿ ವಾದನ, ಹೊಸಪೇಟೆಯ ಮಧುರಾ ಸಂಪಗಾಂವಿ ಅವರ ಭರತ ನಾಟ್ಯ, ಬೆಳಗಾವಿಯ ಬಸವರಾಜ ತಿಮ್ಮಾಪೂರ ಅವರ ಸುಗಮ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಪಡೆದವು.