ಸಾರಾಂಶ
ಊರ ದೇವತೆ ಜಾತ್ರೆಗಾಗಿ ಪುರ ಜನ, ದೈವಸ್ಥರು ಸೇರಿ ಸಭೆ ಮಾಡುತ್ತಿದ್ದ ಸಂದರ್ಭದಲ್ಲೇ ಬ್ರಿಟಿಷ್ ಅಧಿಕಾರಿಯೊಬ್ಬ ಬೂಟ್ ಧರಿಸಿ ದೇಗುಲ ಪ್ರವೇಶ ಮಾಡಿದ್ದ.
ಹೂವಿನಹಡಗಲಿ: ಪಟ್ಟಣದ ಗ್ರಾಮದೇವತೆ ಊರಮ್ಮದೇವಿಯ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಕಳೆದ ಮೇ 14ರಿಂದ ಆರಂಭವಾಗಿರುವ ಜಾತ್ರೆಯು ಮೇ 21ರಂದು ರಾತ್ರಿ ಅದ್ಧೂರಿ ಮೆರವಣಿಗೆ, ಹೂವಿನ ತೇರು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ದೇವಿ ಪವಾಡ: ಊರ ದೇವತೆ ಜಾತ್ರೆಗಾಗಿ ಪುರ ಜನ, ದೈವಸ್ಥರು ಸೇರಿ ಸಭೆ ಮಾಡುತ್ತಿದ್ದ ಸಂದರ್ಭದಲ್ಲೇ ಬ್ರಿಟಿಷ್ ಅಧಿಕಾರಿಯೊಬ್ಬ ಬೂಟ್ ಧರಿಸಿ ದೇಗುಲ ಪ್ರವೇಶ ಮಾಡಿದ್ದ. ನೆರೆದಿದ್ದ ಭಕ್ತರೆಲ್ಲ ಶೂ ತೆಗೆದು ಹೋಗಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಕಿವಿಗೊಡದ ಅಧಿಕಾರಿ ಭಕ್ತರ ಮೇಲೆ ದರ್ಪ ಮೆರೆದಿದ್ದ. ಈ ವೇಳೆ ಗ್ರಾಮದೇವತೆಗೂ ನಿಂದಿಸಿದ್ದ. ಇದರ ಫಲವಾಗಿ ಕೆಲ ಹೊತ್ತಿನಲ್ಲೇ ಬ್ರಿಟಿಷ್ ಅಧಿಕಾರಿ ದೇಗುಲದ ಆವರಣದಲ್ಲೇ ಕುಸಿದು ಬಿದ್ದು, ಕಣ್ಣು ದೃಷಿ ಕಳೆದುಕೊಂಡಿದ್ದ. ನಂತರದಲ್ಲಿ ದೈವಸ್ಥರ ಸಲಹೆಯಂತೆ ಆ ಅಧಿಕಾರಿ ತನ್ನ ಪತ್ನಿಯನ್ನು ದೇಗುಲಕ್ಕೆ ಕರೆ ತಂದು, ದೇವಿಯಲ್ಲಿ ಪತಿಯ ತಪ್ಪು ಮನ್ನಿಸು ಎಂದು ಪ್ರಾರ್ಥಿಸಿ, ತಪ್ಪು ಕಾಣಿಗೆ ನೀಡಿದ ಬಳಿಕ ಅಧಿಕಾರಿಯ ಕಣ್ಣು ದೃಷಿ ಮರಳಿ ಬಂದ ಪವಾಡ ನಡೆದಿದೆ. ಹೀಗೆಂದು ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯ ದೇವಿಯ ಇತಿಹಾಸ ಬಿಚ್ಚಿಟ್ಟರು.ಬ್ರಿಟಿಷರ ಆಡಳಿತದಲ್ಲಿ ಯಾವುದೇ ಸಭೆ ಸಮಾರಂಭ ಮಾಡಲು ಅವರ ಅನುಮತಿ ಕಡ್ಡಾಯವಾಗಿತ್ತು. ಆದರೆ ಪುರ ಜನರು ಮತ್ತು ದೈವಸ್ಥರು ಅನುಮತಿ ಪಡೆಯದೇ ಕಾರಣ ಬ್ರಿಟಿಷ್ ಅಧಿಕಾರಿ ದೇಗುಲಕ್ಕೆ ಬಂದು ದರ್ಪ ಮೆರೆಯುವ ಜತೆಗೆ ದೇವಿಯನ್ನು ನಿಂದಿಸಿದ್ದನು ಎಂದರು.
ದೇವಿಯ ಪವಾಡಕ್ಕೆ ಬೆರಗಾದ ಬ್ರಿಟಿಷ್ ಅಧಿಕಾರಿ, ಗ್ರಾಮದೇವತೆ ಜಾತ್ರೆಯ ಸಂದರ್ಭದಲ್ಲಿ ಪೊಲೀಸರು ಊರ ದೇವಿಗೆ ಸಕಲ ಗೌರವಗಳೊಂದಿಗೆ ಪೂಜೆ ಸಲ್ಲಿಸಬೇಕೆಂದು ಆದೇಶ ಹೊರಡಿಸಿದ್ದನು. ಆ ಹಿನ್ನೆಲೆಯಲ್ಲಿ ಇಂದಿಗೂ ಒಂದು ದಿನ ಪೊಲೀಸ್ ಠಾಣೆಯಲ್ಲೇ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ, ದೇವಿ ಉಡಿ ತುಂಬುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಿದರು.ಗ್ರಾಮದೇವತೆಯ ಮಹಿಮೆ, ಪವಾಡಗಳನ್ನು ಬ್ರಿಟಿಷ್ ಅಧಿಕಾರಿ ಕಣ್ಣಾರೆ ಕಂಡು, ತಾನು ಮಾಡಿದ ಪಶ್ಚಾತ್ತಾಪಕ್ಕಾಗಿ ಪಟ್ಟಣದ ದೇಗುಲಗಳನ್ನು ಜೀರ್ಣೋದ್ಧಾರ ಮಾಡಲು ತೀರ್ಮಾನಿಸಿದ್ದ. ಆ ಸಂದರ್ಭದಲ್ಲಿ ಊರಮ್ಮದೇವಿ ದೇವಸ್ಥಾನ, ತೇರು ಹನುಮಪ್ಪ ದೇವಸ್ಥಾನ, ಗುರು ಕೊಟ್ಟೂರೇಶ್ವರ ದೇವಸ್ಥಾನ, ಗೋಣಿಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾನೆಂದು ಹೇಳಿದರು.
ಗ್ರಾಮ ದೇವತೆ ಜಾತ್ರೆಯನ್ನು ಎಲ್ಲ ಜಾತಿ ಜನಾಂಗಗಳ ಸಹಯೋಗದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಜಾತ್ರೆ ನಂತರದ ಒಂದು ವರ್ಷ ಕಾಲ ಮದುವೆ, ಗೃಹ ಪ್ರವೇಶದಂತಹ ಇತರೆ ಶುಭ ಸಮಾರಂಭ ನಡೆಸಬಾರದು ಎಂಬ ಮೌಢ್ಯ ನಿಯಮ ಆಚರಣೆ ಅಗತ್ಯವಿಲ್ಲ ಎಂದು ಹೇಳಿದರು.