ಆನ್‌ಲೈನ್‌ನಲ್ಲಿ ಲಕ್ಷಾಂತರ ರು. ವಂಚನೆ: ದೂರು

| Published : May 21 2024, 12:35 AM IST

ಸಾರಾಂಶ

ಹಣ ವರ್ಗಾವಣೆ ಮಾಡಿಕೊಂಡ ಆರೋಪಿತರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಶ್ರೀಪಾದ ಗಣೇಶ ಭಟ್ ದೂರು ನೀಡಿದ್ದಾರೆ.

ಶಿರಸಿ: ಬ್ಯಾಂಕ್‌ವೊಂದರ ಹೆಸರಿನ ಆ್ಯಪ್‌ನ ಲಿಂಕ್ ಭರ್ತಿ ಮಾಡಿ ಇಲ್ಲಿನ ಕಸ್ತೂರಬಾನಗರದ ನಿಸರ್ಗ ಬಡಾವಣೆಯ ಶ್ರೀಪಾದ ಗಣೇಶ ಭಟ್ಟ ಸುಮಾರು ₹೬ ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತರು ಮೇ ೧೬ರಂದು ವಂಚಿಸುವ ಉದ್ದೇಶದಿಂದ ವಾಟ್ಸ್‌ಆ್ಯಪ್‌ಗೆ ಬ್ಯಾಂಕ್‌ವೊಂದರ ಹೆಸರಿನ ಲಿಂಕ್ ಕಳುಹಿಸಿದಾಗ ಶ್ರೀಪಾದ ಭಟ್ಟ ಆ ಲಿಂಕ್ ತೆರೆದು ಆ್ಯಪ್‌ನಲ್ಲಿ ಹೆಸರು, ಮೊಬೈಲ್ ನಂಬರ್ ಮತ್ತು ಆಧಾರ ಕಾರ್ಡ್ ನಂಬರ್‌ ಹಾಕಿದ್ದಾರೆ. ಆ್ಯಪ್‌ದಲ್ಲಿ ಎಲ್ಲ ಮಾಹಿತಿ ಹಾಕಿದ ಮೇಲೆ ₹೧.೯೦ ಲಕ್ಷ, ₹೯೮ ಸಾವಿರ, ₹೯೦ ಸಾವಿರ, ₹೫೦ ಸಾವಿರ ಹಣವು ಸೇವಿಂಗ್ಸ್ ಖಾತೆಯಿಂದ ಒಟ್ಟು ₹೪.೨೮ ಲಕ್ಷ ಕಡಿತವಾಗಿದೆ. ನಂತರ ₹೫೦ ಸಾವಿರ, ₹೫೦ ಸಾವಿರ, ₹೫೦ ಸಾವಿರ ಒಡಿ ಖಾತೆಯಿಂದ ಒಟ್ಟೂ ₹೧.೫೦ ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆ ಮಾಡಿಕೊಂಡ ಆರೋಪಿತರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಶ್ರೀಪಾದ ಗಣೇಶ ಭಟ್ ದೂರು ನೀಡಿದ್ದಾರೆ. ಈ ಕುರಿತು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ಡಿಕ್ಕಿ: ಪಾದಚಾರಿಗೆ ಗಾಯ

ಶಿರಸಿ: ಪಾದಚಾರಿಯೋರ್ವರಿಗೆ ಅಪರಿಚಿತ ಬೈಕ್ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಚಿಪ್ಪಗಿ ಚೆಕ್‌ಪೋಸ್ಟ್ ಬಳಿ ನಡೆದಿದೆ.ಬನವಾಸಿ ರಸ್ತೆಯ ಖುರ್ಸೆ ಕಾಂಪೌಂಡ್‌ನ ಗಾಯತ್ರಿನಗರದ ೫ನೇ ಕ್ರಾಸ್‌ನ ಬ್ಯಾಂಕ್ ನೌಕರ ರವಿ ಭೀಮಪ್ಪ ಹಂಚಿನಮನೆ(೫೦) ಗಾಯಗೊಂಡ ಪಾದಚಾರಿ. ಇವರು ತಾಲೂಕಿನ ಚಿಪಗಿಯ ಚೆಕ್‌ಪೋಸ್ಟ್ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಸವಾರ ಶಿರಸಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಡಿಕ್ಕಿ ಹೊಡೆದಿದ್ದಾನೆ. ರಸ್ತೆಯ ಮೇಲೆ ಬಿದ್ದುಕೊಂಡಿದ್ದ ಪಾದಚಾರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಮತ್ತು ಅಪಘಾತದ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಪರಾರಿಯಾಗಿದ್ದಾನೆ ಎಂದು ಪುಷ್ಪಾ ರವಿ ಹಂಚಿನಮನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.