ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮಕ್ಕಳ ಭಾಗ್ಯ ಕರುಣಿಸುವಂತೆ ಹರಕೆ ಕಟ್ಟಿಕೊಂಡು ಪೂಜಿಸುವ ಚೆಲುವನಾರಾಯಣಸ್ವಾಮಿಯ ಪ್ರಕೃತಿ ಆರಾಧನೆಯ ಮಳೆಗಾಲದ ಉತ್ಸವ ತೊಟ್ಟಿಲ ಮಡುಜಾತ್ರೆ ಅಷ್ಠತೀರ್ಥೋತ್ಸವ ಸೋಮವಾರ ವೈಭವದಿಂದ ನೆರವೇರಿತು.ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಅಂಗವಾಗಿ ನಡೆದ ಅಷ್ಠತೀರ್ಥೋತ್ಸವದ ಧಾರ್ಮಿಕ ಕೈಂಕರ್ಯಗಳು ಬೆಳಗಿನ 7 ಗಂಟೆಗೆ ಆರಂಭವಾದವು. ಮಕ್ಕಳಭಾಗ್ಯ ಅಪೇಕ್ಷಿತ ದಂಪತಿಗಳು ಹರಕೆಕಟ್ಟಿಕೊಂಡು ಸ್ವಾಮಿಯ ಪಾದುಕೆಯಹಿಂದೆ ಸಾಗಿಬಂದರೆ ಸಹಸ್ರಾರು ಭಕ್ತರು ತೊಟ್ಟಿಲಮಡು ಜಾತ್ರೆಯಲ್ಲಿ ಪಾಲ್ಗೊಂಡರು.
ವೇದಾಂತ ದೇಶಿಕರ ಸನ್ನಿಧಿಗೆ ಸ್ವಾಮಿಯ ಪಾದುಕಾ ಪಲ್ಲಕ್ಕಿಯ ಉತ್ಸವ ನಡೆದ ನಂತರ 9 ಗಂಟೆಗೆ ವಜ್ರ ಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರ ಉತ್ಸವ ಕಲ್ಯಾಣಿಗೆ ನೆರವೇರಿತು.ನಂತರ ಗಜೇಂದ್ರವರದನ ಸನ್ನಿಧಿಯ ಮುಂಭಾಗದಯಲ್ಲಿ ವೇದ ಘೋಷದೊಂದಿಗೆ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿದ ನಂತರ ಅಷ್ಠತೀರ್ಥೋತ್ಸವದ ಕಾರ್ಯಕ್ರಮಗಳು ಆರಂಭವಾದವು. ಗೃಹಿಣಿಯರು ಮಡಿಲುತುಂಬಿಕೊಂಡು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ಅರ್ಚಕ ಎಸ್.ನಾರಾಯಣಭಟ್ಟರ್ ಮತ್ತು ಯೋಗಾನಂದಭಟ್ಟರ್ ಕಲ್ಯಾಣಿಯಲ್ಲಿ ಅವಭೃತ ಚೂರ್ಣಿಕಾ ಮಂತ್ರಗಳೊಂದಿಗೆ ಸ್ವಾಮಿ ಪಾದುಕೆಗೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ಮಾಡಿ ನೆರದ ಭಕ್ತರ ಇಷ್ಟಾರ್ಥ ಈಡೇರಲಿ ನಾಡು ಸುಭೀಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಮುಕುಂದನ್ ಕರಗಂರಾಮಪ್ರಿಯ ಸೇರಿದಂತೆ ವೇದ ಪಾರಾಯಣ ಕೈಂಕರ್ಯಪರರು, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ದೇವಾಲಯದ ಇಒ ಎನ್.ಎಸ್ ಶೀಲಾ, ಗ್ರಾಮ ಆಡಳಿತಾಧಿಕಾರಿ ರಮೇಶ್ ಭಾಗವಹಿಸಿದ್ದರು.
ಅಷ್ಠತೀರ್ಥಗಳಲ್ಲಿ ಅಭಿಷೇಕ ತೊಟ್ಟಲಮಡು ಜಾತ್ರೆ:ಬೆಳಗ್ಗೆ 10.30ಕ್ಕೆ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಹೊರಟ ಸ್ವಾಮಿಯ ಸ್ವರ್ಣಪಾದುಕೆಗೆ ಚೆಲುವ ದೈವೀವನದ ಮಧ್ಯೆ ಇರುವ ವೇದಪುಷ್ಕರಣಿ, ಶ್ರೀರಾಮ ಸೀತಾಮಾತೆಯ ದಾಹತಣಿಸಲು ಬಾಣಬಿಟ್ಟು ಹೆಬ್ಬಂಡೆಗಳ ನಡುವಿನಿಂದ ನೀರುಕ್ಕಿಸಿದ ದನುಷ್ಕೋಟಿ, ಬೆಟ್ಟಗುಡ್ಡಗಳಿಂದ ಹರಿಯುವ ಯಾದವಾತೀರ್ಥ, ಬೆಟ್ಟಗಳಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಸರ್ಕಾರಿ ಬಾಲಕರಶಾಲೆ ಹಿಂಭಾಗವಿರುವನರಸಿಂಹತೀರ್ಥ, ವೈಕುಂಠವಾಸಿಯಾದವರಿಗೆ ಮೋಕ್ಷ ಕರುಣಿಸುವ ನಂಬಿಕೆಯಿರುವ ನಾರಾಯಣ ತೀರ್ಥಗಳಲ್ಲಿ ಅಭಿಷೇಕ ನೆರವೇರಿಸಲಾಯಿತು.
ಸಂಜೆ 5.30ರ ವೇಳೆಗೆ ವೈಕುಂಠಗಂಗೆಯಲ್ಲಿ ಕೊನೆಯ ಅಭಿಷೇಕ ಮಾಡಲಾಯಿತು. ಪ್ರಕೃತಿಯ ಸುಂದರ ಪರಿಸರದ ಮಧ್ಯೆಯಿರುವ ವೈಕುಂಠಗಂಗೆ ತೊಟ್ಟಲಮಡು ಬಳಿ ಸಂಜೆ ನಡೆದ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ವೈಕುಂಠನಾಥನಿಗೆ ಪೂಜೆ ಸಲ್ಲಿಸಿದರು.ಇದೇ ವೇಳೆ ಸಿಹಿತಿನಿಸು ಮತ್ತು ಆಟಿಕೆಗಳ ಅಂಗಡಿಗಳಿಗೆ ಬರ್ಜರಿ ವ್ಯಾಪಾರ ನಡೆಯಿತು. ವಿಷ್ಣುಸಹಸ್ರನಾಮ ಪಾರಾಯಣದೊಂದಿಗೆ ಸಾಗಿದ ಪಾದುಕೆ ಯೋಗಾನರಸಿಂಹನಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ರಾತ್ರಿ 9ಕ್ಕೆ ದೇವಾಲಯ ತಲುಪಿ ಅಷ್ಠತೀರ್ಥೋತ್ಸವ ಮುಕ್ತಾಯವಾಯಿತು.
ಮೇಲುಕೋಟೆ ಗ್ರಾಮ ಪಂಚಾಯ್ತಿ ತೊಟ್ಟಿಲಮಡುಗೆ ಬರುವ ರಸ್ತೆ ಹಾಗೂ ವೈಕುಂಠ ಗಂಗೆಯಬಳಿ ಸ್ವಚ್ಚತಾ ಕಾರ್ಯ ಮಾಡಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿತ್ತು. ಗ್ರಾಪಂ ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಜಿ.ಕೆ ಕುಮಾರ್, ಹಾಗೂ ಸದಸ್ಯರು ಪಿಡಿಒ ರಾಜೇಶ್ವರ್ ಆಸಕ್ತಿಯ ಪರಿಣಾಮ ತೊಟ್ಟಿಲಮಡುಜಾತ್ರೆಗೆ ಭಕ್ತಸ್ನೇಹಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ಇನ್ಸ್‌ಪೆಕ್ಟರ್ ಸಿದ್ಧಪ್ಪ ಮಾರ್ಗದರ್ಶನದಲ್ಲಿ ಮೇಲುಕೋಟೆ ಪೊಲೀಸರು ಜಾತ್ರಾ ಸಮಯದಲ್ಲಿ ಕಣಿವೆ ಬಳಿಯಿಂದ ತೊಟ್ಟಿಲ ಮಡುಬಳಿಗೆ ಯಾವುದೇ ವಾಹನಗಳು ಹೋಗದಂತೆ ಕಣಿವೆಯಲ್ಲೇ ವಾಹನಗಳ ಪಾರ್ಕಿಂಗ್ ಮಾಡಿಸಿ ವಾಹನದಟ್ಟಣೆಯನ್ನು ನಿಯಂತ್ರಿಸಿದರು. ದೇವಾಲಯದ ಜೋಡೀದಾರ್ ಮನೆತನ ಹಾಗೂ ವಿವಿಧ ಜನಾಂಗದವರು ವಿಶೇಷವಾದ ಕದಂಬ ಪ್ರಸಾದ ತಯಾರಿಸಿ ಭಕ್ತರಿಗೆ ವಿನಿಯೋಗ ಮಾಡಿದರು.