ಸಾರಾಂಶ
ರಸ್ತೆಯಲ್ಲಿ ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಸಶಸ್ತ್ರ ಪೊಲೀಸ್ ಪೇದೆ ಬಸವರಾಜ ಕಮತರ ಮೇಲೆ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಇಕ್ಬಾಲ್ ತಮಟಗಾರ, ಅಮೀರ್ ತಮಟಗಾರ ಹಾಗೂ ಅಜಮದ್ ಅಲಿ ಮುಲ್ಲಾ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾರೆ.
ಧಾರವಾಡ:
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಹಾಗೂ ಆತನ ಸಹಚರರು ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ರಸ್ತೆಯಲ್ಲಿ ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಸಶಸ್ತ್ರ ಪೊಲೀಸ್ ಪೇದೆ ಬಸವರಾಜ ಕಮತರ ಮೇಲೆ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಇಕ್ಬಾಲ್ ತಮಟಗಾರ, ಅಮೀರ್ ತಮಟಗಾರ ಹಾಗೂ ಅಜಮದ್ ಅಲಿ ಮುಲ್ಲಾ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾರೆ. ಎಡ ಕಣ್ಣಿನ ಮೇಲೆ ಹಾಗೂ ಮುಖದ ಇತರ ಭಾಗಗಳಿಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದು, ಏಳು ಕಡೆಗೆ ಹೊಲಿಗೆ ಹಾಕಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಲ್ಲೆಗೊಳಗಾಗಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ಕಮತರ, ಭಾನುವಾರ ಸಂಜೆ ಮಾರುಕಟ್ಟೆಗೆ ಟೇಲರ್ ಅಂಗಡಿಗೆ ಹೊರಟಾಗ ದಾರಿ ಮಧ್ಯದ ಚಿಕ್ಕದಾದ ರಸ್ತೆಯಲ್ಲಿ ಕಾರು ನಿಲ್ಲಿಸಲಾಗಿತ್ತು. ಬೈಕ್ ಹೋಗಲು ಸಹ ದಾರಿ ಇಲ್ಲದ ಕಾರಣ ದಾರಿ ಮಧ್ಯೆ ಕಾರು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಮೂವರು ಸೇರಿ ಹಲ್ಲೆ ಮಾಡಿದರು. ಈ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ ಎಂದರು.ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಮೂವರನ್ನು ಬಂಧಿಸಿ ಅವರ ವಿರುದ್ಧ 307 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.