ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವವನ್ನು ಸಂಪ್ರದಾಯಬದ್ಧವಾಗಿ ಮೈಸೂರು ದಸರಾ ಮಾದರಿಯಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ಇದಕ್ಕೂ ಮುನ್ನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಅಂಗವಾಗಿ ಪ್ರತಿಷ್ಟಾಪಿಸಲಾಗಿರುವ ಮಹಾಗೌರಿ ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ತಮ್ಮ ಧರ್ಮಪತ್ನಿ ಶೈಲಜ ಸೋಮಣ್ಣ ಅವರೊಂದಿಗೆ ಪೂಜೆ ಸಲ್ಲಿಸಿದರು. ವಿ.ಸೋಮಣ್ಣ ದಂಪತಿಗಳು ಅಷ್ಟಮಿ ಪ್ರಯುಕ್ತ ಜರುಗಿದ ಶ್ರೀ ದುರ್ಗಾ ಹೋಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಪೂರ್ವಿಕರು ನಮಗೆ ನೀಡಿದ ಉತ್ತಮ ಸಂದೇಶಗಳಾಗಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಯಾವುದೇ ಭೇದ ಭಾವಗಳಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ತುಮಕೂರಿನಲ್ಲಿ ದಸರಾ ಉತ್ಸವ ಆಚರಣೆ ಮಾಡುತ್ತಿರುವುದು ಹರ್ಷ ತಂದಿದೆ ಎಂದರು. ಎಲ್ಲಾ ರೀತಿಯ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ದಸರಾ ಆಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳು ನಡೆಸುತ್ತಿದ್ದು, ಪ್ರತಿ ವರ್ಷವೂ ಕೂಡಾ ಇದೇ ರೀತಿಯಾಗಿ ಆಚರಿಸಿಕೊಂಡು ಹೋಗುವ ಮೂಲಕ ಅಕ್ಕ ಪಕ್ಕದ ರಾಜ್ಯಗಳಿಗೆ ನಮ್ಮ ಸಂಸ್ಕೃತಿ ಆಚರಣೆಯನ್ನು ಪಸರಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ತಹಶೀಲ್ದಾರ್ ರಾಜೇಶ್ವರಿ, ಮುಜರಾಯಿ ತಹಸೀಲ್ದಾರ್ ಸವಿತಾ, ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ರಾಮತೀರ್ಥನ್, ಮತ್ತಿತರರು ಉಪಸ್ಥಿತರಿದ್ದರು.