ಎಸ್ಸೆಸ್ಸೆಲ್ಸಿ: ವಿಜ್ಞಾನ ಪ್ರಶ್ನೆ ಪತ್ರಿಕೆ ರಚನೆ ಬದಲಾಗಲಿ

| Published : Oct 11 2024, 11:56 PM IST

ಸಾರಾಂಶ

ವಿಜ್ಞಾನ ಪ್ರಶ್ನೆಪತ್ರಿಕೆಯು ಅತ್ಯಂತ ಸವಾಲಿನದ್ದಾಗಿದ್ದು, ಗ್ರಾಮೀಣ ವಲಯದ ಶಾಲೆಗಳಷ್ಟೇ ಅಲ್ಲ, ನಗರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಕೂಡ ಈ ಪ್ರಶ್ನೆಪತ್ರಿಕೆ ಬಿಡಿಸಲು ಪರದಾಡುವಂತಾಗಿದೆ.

ಧಾರವಾಡ:

ಕಳೆದ ನಾಲ್ಕೈದು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆಯು ಅತ್ಯಂತ ಸವಾಲಿನದ್ದಾಗಿದ್ದು ಈ ಬಾರಿಯಾದರೂ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಬದಲಾವಣೆ ತರುವ ವಿಚಾರವಾಗಿ ಧಾರವಾಡ ಜಿಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯು ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿದೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿರುವ ವೇದಿಕೆಯು, ವಿಜ್ಞಾನ ಪ್ರಶ್ನೆಪತ್ರಿಕೆಯು ಅತ್ಯಂತ ಸವಾಲಿನದ್ದಾಗಿದ್ದು, ಗ್ರಾಮೀಣ ವಲಯದ ಶಾಲೆಗಳಷ್ಟೇ ಅಲ್ಲ, ನಗರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಕೂಡ ಈ ಪ್ರಶ್ನೆಪತ್ರಿಕೆ ಬಿಡಿಸಲು ಪರದಾಡುವಂತಾಗಿದೆ. ಒಂದು ರೀತಿಯಲ್ಲಿ ಮುಂದೆ ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಬೇಕೋ? ಬೇಡವೋ? ಎಂಬ ಜಿಜ್ಞಾಸೆಯಲ್ಲಿ ಮಕ್ಕಳನ್ನು ಚಿಂತೆಗೀಡು ಮಾಡಿದೆ. ಗ್ರಾಮೀಣ ಮಕ್ಕಳ ಮನೋವೈಜ್ಞಾನಿಕ, ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಸ್ಥಿತಿಗತಿ ಮತ್ತು ಶಾಲೆಗಳಲ್ಲಿ ಪ್ರಯೋಗಗಳಿಗೆ ಅಥವಾ ಕನಿಷ್ಠ ಚಟುವಟಿಕೆಗಳಿಗೆ ಲಭ್ಯವಿರುವ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆ ರಚಿಸಬೇಕು ಎಂದು ಮನವಿ ಪತ್ರದಲ್ಲಿ ಸಲಹೆ ನೀಡಲಾಗಿದೆ.

ಅಕ್ಕಪಕ್ಕದ ರಾಜ್ಯಗಳ 10ನೇ ತರಗತಿಯ ಪ್ರಶ್ನೆಪತ್ರಿಕೆ ಗಮನಿಸಿದಾಗ ರಾಜ್ಯದಲ್ಲಿ ಬಹುಸಂಖ್ಯಾತ ಮಕ್ಕಳ ಮಾನಸಿಕ ಸಾಮರ್ಥ್ಯಕ್ಕಿಂತ ಉನ್ನತ ಮಟ್ಟದ ಪ್ರಶ್ನೆ ನೀಡಿರುವುದು ಅವೈಜ್ಞಾನಿಕ. ಇದು ರಾಜ್ಯಾದ್ಯಂತ ವಿಜ್ಞಾನ ಬೋಧಕರ ನೈತಿಕತೆ ಕುಸಿಯುವಂತೆ ಮಾಡುತ್ತಿರುವುದು ವಿಷಾದನೀಯ ಸಂಗತಿ. ಕೂಡಲೇ ಈ ಕುರಿತು ಸೂಕ್ತ ಬದಲಾವಣೆ ಮಾಡಬೇಕು. ಹಾಗೂ ಈ ಕುರಿತಾಗಿ ವೇದಿಕೆ ಸಲಹೆಗಳನ್ನು ಸಹ ಪರಿಗಣಿಸಬೇಕೆಂದು ವೇದಿಕೆಯು ಆಗ್ರಹಿಸಿದೆ.

ಏನವು ಸಲಹೆಗಳು:

ಸಿಬಿಎಸ್‌ಇ ನಿಯಮಾವಳಿಯಂತೆ ರೂಪಣಾತ್ಮಕ ಮೌಲ್ಯ ಮಾಪನದ ಅಂದರೆ ಆಂತರಿಕ ಅಂಕ ಸಹಿತ ಉತ್ತೀರ್ಣತೆಗೆ ಪರಿಗಣಿಸಬೇಕು. ಕಠಿಣತೆಯ ಮಟ್ಟವು ಸರಾಸರಿಗಿಂತ ಕಡಿಮೆ ಇರುವವರಿಗೆ ಶೇ. 50 ಸರಾಸರಿಯವರಿಗೆ ಶೇ.30 ಹಾಗೂ ಸರಾಸರಿಗಿಂತ ಅಧಿಕ ಇರುವವರಿಗೆ ಶೇ.20 ಇದ್ದರೆ ಸೂಕ್ತ. ಅಂದರೆ ಸುಲಭವಾಗಿ 10ನೇ ತರಗತಿ ತೇರ್ಗಡೆಯಾಗುವವರಿಗೆ ಅನವಶ್ಯಕ ಹೊರೆ ಬೇಡ. ಪಠ್ಯ ಪುಸ್ತಕದಲ್ಲಿಯ ಅಭ್ಯಾಸ ಕ್ರಮದಲ್ಲಿರುವ ಪ್ರಶ್ನೆಗಳನ್ನೇ ಶೇ. 50ರಲ್ಲಿ ಸೇರಿಸಬೇಕು, ಇಲ್ಲದೇ ಹೋದರೆ ಅಭ್ಯಾಸ ಕ್ರಮಕ್ಕೆ ಬೆಲೆ ಇರುವುದಿಲ್ಲ. ಕನಿಷ್ಠ ಪಕ್ಷ ಕಳೆದ ವರ್ಷಗಳ ಶೇ.20 ರಷ್ಟಾದರೂ ಪ್ರಶ್ನೆಗಳು ಪುನರಾವರ್ತನೆ ಆಗಲಿ. ಶೇ. 50ರಷ್ಟು ಪ್ರಶ್ನೆಗಳು ನೇರವಾಗಿಯೇ ಇರಲಿ, ವಿನಾಕಾರಣ ತಿರುಚಿ, ಸಾಧಾರಣ ಕಲಿಕಾ ಮಕ್ಕಳಿಗೆ ಮಾನಸಿಕ ಉದ್ವೇಗಕ್ಕೊಳಗಾಗದಂತಿರಲಿ. ಕೌಶಲ ವ್ಯಾಪ್ತಿಯಲ್ಲಿ ಬರುವ ಚಿತ್ರ ಬಿಡಿಸುವ ಪ್ರಶ್ನೆಗಳು ಕಡ್ಡಾಯವಾಗಿ 12 ಅಂಕಗಳು ಕೇವಲ ಚಿತ್ರಿಸಿ, ಭಾಗಗಳನ್ನು ಗುರುತಿಸುವ ಹಾಗೆ ಮಾತ್ರ ಇರಲಿ, ಇನ್ನುಳಿದ ನಾಲ್ಕು ಅಂಕಗಳಲ್ಲಿ ಬೇಕಾದರೆ ಉನ್ನತ ಮಟ್ಟದ ಕೌಶಲ ಗುರುತಿಸುವಂತಾಗಲಿ. ಪ್ರಶ್ನೆಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆಯನ್ನು ಕನಿಷ್ಠ 15ಕ್ಕೆ ಏರಿಸಬೇಕು. ಜತೆಗೆ ನಾಲ್ಕು ಅಂಕದ ಹೊಂದಿಸಿ ಬರೆಯಿರಿ, ಒಂದೇ ವಾಕ್ಯದಲ್ಲಿ ಉತ್ತರಿಸುವ ಆರು ಪ್ರಶ್ನೆಗಳಿರಲಿ, ಎರಡು ಅಂಕದ 10 ಪ್ರಶ್ನೆಗಳಿರಲಿ, ಮೂರು ಅಂಕದ ಪ್ರಶ್ನೆಗಳನ್ನು ಐದಕ್ಕೆ ಮಿತಿಗೊಳಿಸೋಣ ಹಾಗೂ ನಾಲ್ಕು ಅಂಕದ ನಾಲ್ಕು ಪ್ರಶ್ನೆಗಳಿರಲಿ. ಐದು ಅಂಕದ ಪ್ರಶ್ನೆಯೇ ಬೇಡ. ಘಟಕವಾರು ವೇಟೇಜ್‌, ಉದ್ದೇಶವಾರು ವೇಟೇಜ್‌ ನೀಡಿದಾಗ ಶಿಕ್ಷಕರು ಪಾಠ ಮಾಡುವಾಗ ಕೂಡಾ ಸಮರ್ಪಕವಾಗಿ ಉದ್ದೇಶಗಳಿಗನುಗುಣವಾಗಿ ಮಹತ್ವ ನೀಡಲು ಸಹಾಯಕವಾಗುತ್ತದೆ ಎಂಬ ಸಲಹೆಗಳನ್ನು ನೀಡಿದ್ದಾರೆ.

ವೇದಿಕೆ ಪರವಾಗಿ ಶ್ರೀಧರ ಪಾಟೀಲ ಕುಲಕರ್ಣಿ, ವಿ.ಎಸ್. ಹುದ್ದಾರ, ವಿ.ಎಸ್. ರೇಶ್ಮಿ, ಡಿ.ಬಿ. ದೊಡ್ಡಮನಿ, ವನಮಾಲಾ ಹೆಗಡೆ, ಸಂಜೀವಕುಮಾರ ಭೂಶೆಟ್ಟಿ, ಪ್ರಮೋದ ವಾದಿರಾಜ, ಟಿ.ಎಸ್. ಚೌಗಲೆ, ಛಾಯಾ, ಜಯಶ್ರೀ ಎಂ. ಸಿದ್ದಪ್ಪ ಭಾವಿಕಟ್ಟಿ, ಸಾಯಿಬಣ್ಣ ರೂಗಿ, ಸವಿತಾ ಶೆಗಾವಿ, ವೀಣಾ ಪತ್ತಾರ, ರಾಜಶ್ರೀ ಬೀಡಿ, ಜಟ್ಟೆಪ್ಪ ಗರಸಂಗಿ, ಸುವರ್ಣಾ ಗುಡ್ಡದಮಠ, ಎನ್.ಎಸ್. ಹಿರೇಮಠ, ಝಾಕೀರಹುಸೇನ್‌ ಮುಲ್ಲಾ, ಆರ್.ಎಂ. ನಾವಳ್ಳಿ, ಎಲ್.ಎಂ. ಪೀರಜಾದೆ, ಆರ್‌.ಬಿ. ಗುಡಿ. ಬಿ.ವಿ. ದರ್ಗ, ಗಾಯತ್ರಿ ಪತ್ತಾರ, ಸಿ.ಎಸ್. ಸಣ್ಣಮನಿ, ಬಸವರಾಜ ಲೋಬೋಗೋಳ, ಈಶ್ವರ ಉದಮೇಶ ಹಾಗೂ ಜಿಲ್ಲೆಯ ನೂರಾರು ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.