ಸಾರಾಂಶ
ಹಾನಗಲ್ಲ: ಮಾಹಿತಿ ದೋಷದಿಂದಾಗಿ ಹಲವು ಕೃಷಿಕರು ಕೃಷಿಯಲ್ಲಿ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದು, ಸೂಕ್ತ ಮಾಹಿತಿ ಮಾರ್ಗದರ್ಶನದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಕೃಷಿ ಲಾಭದಾಯಕವಾಗಿದೆ ಎಂದು ತೋಟಗಾರಿಕಾ ಕೃಷಿ ತಜ್ಞ ಶಿವಮೊಗ್ಗದ ಎಂ.ಎನ್.ಗುರುನಾಥ ತಿಳಿಸಿದರು.ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪದ ಮಹೇಶ ಹೊಂಬಳ ಅವರ ತೋಟದಲ್ಲಿ ಆಯೋಜಿಸಿದ ತೋಟಗಾರಿಕೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ವೈಜ್ಞಾನಿಕ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೆನಾಡ ಅಡಕೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳನ್ನು ಈಗ ಬಯಲು ಸೀಮೆಯಲ್ಲೂ ಬೆಳೆಯಲು ಆರಂಭವಾಗಿದೆ. ಆದರೆ ಈ ಬೆಳೆಗಳಿಗೆ ಬೇಕಾಗುವ ವಾತಾವರಣ, ಉಷ್ಣಾಂಶ ಹಾಗೂ ನೀರಿನ ಲಭ್ಯತೆ ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದುದು. ಇವೆಲ್ಲವನ್ನೂ ತಿಳಿಯದೆ ಕೆಲವೊಮ್ಮೆ ರೈತರು ಹೊಸ ಬೆಳೆಗಳಿಗೆ ಮುಂದಾಗಿ ಆರ್ಥಿಕ ಸಂಕಷ್ಟ ಎದುರಿಸುವ ಸಂದರ್ಭಗಳೇ ಹೆಚ್ಚು. ಪರಿಶ್ರಮವಿದ್ದರೆ ಮಾತ್ರ ಕೃಷಿಯಲ್ಲಿ ಯಶಸ್ಸು ಪಡೆಯಬಹುದು. ಅವರಸರದ ನಿರ್ಣಯಗಳು ಸಲ್ಲದು. ತೋಟಗಾರಿಕೆ ಬೆಳೆಗಳಲ್ಲಿ ತಳಿ ಹಾಗೂ ನಿರ್ವಹಣೆ ಅತ್ಯಂತ ಮುಖ್ಯವಾಗುತ್ತದೆ. ಇವು ದೀರ್ಘಕಾಲಿಕ ಬೆಳೆಗಳಾಗಿದ್ದರಿಂದ ತುಂಬ ಎಚ್ಚರಿಕೆ ಬೇಕು. ಕೃಷಿಯಲ್ಲಿ ಕೆಲಸಗಾರರ ಕೊರತೆ ಹೆಚ್ಚುತ್ತಿದೆ. ಭೂಮಿ ಇದ್ದರೂ ಕೃಷಿ ಮಾಡಲಾಗದೆ ಕೈಚೆಲ್ಲುವ ಸಂದರ್ಭಗಳಿವೆ. ಆದರೆ ಈಗ ವೈಜ್ಞಾನಿಕವಾಗಿ ಹಾಗೂ ಸುಧಾರಿತ ವ್ಯವಸಾಯ ಕ್ರಮಗಳಲ್ಲಿ ಕೃಷಿಗೆ ಮುಂದಾದರೆ ಉತ್ತಮ ಬೆಳೆ ಹಾಗೂ ಲಾಭ ಸಾಧ್ಯ. ಕೃಷಿಕನಿಗೆ ತಾಳ್ಮೆ ಅತ್ಯಂತ ಮುಖ್ಯ. ಹಲವು ಸಂದರ್ಭದಲ್ಲಿ ಪ್ರಕೃತಿ ವ್ಯತ್ಯಾಸಕ್ಕೆ ರೈತ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ. ಏನೇ ಆದರೂ ಕೃಷಿ ಲಾಭದಾಯಕ ಎಂಬುದನ್ನು ಮರೆಯಬಾರದು ಎಂದರು.ನಿವೃತ್ತ ಡಿವಾಯ್‌ಎಸ್‌ಪಿ ಕೃಷಿಕ ಈರನಗೌಡ ವೀರನಗೌಡ್ರ ಮಾತನಾಡಿ, ರೈತ ಕುಟುಂಬದಿಂದ ಬಂದವರಿಗೆ ಕೃಷಿ ಕೇವಲ ಒಂದು ಉದ್ಯೋಗವಾಗಿತ್ತು. ಆದರೆ ಈಗ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ತೋಟಗಾರಿಕೆ ಬೆಳೆಗಳಲ್ಲಿ ಅತ್ಯಂತ ಸುಧಾರಿತ ಕ್ರಮಗಳು ಸಾಧ್ಯವಾಗಿವೆ. ಬದಲಾದ ಕಾಲಕ್ಕೆ ವಿಜ್ಞಾನವನ್ನು ಬಳಸಿಕೊಂಡು ಕೃಷಿಗೆ ಮುಂದಾಗಬೇಕು. ಹತ್ತು ಹಲವು ಕೃಷಿಗೆ ಸಂಬಂಧಿಸಿದ ಕಂಪನಿಗಳು ಮನೆ ಬಾಗಿಲಿಗೆ ಬರುತ್ತವೆ. ಆದರೆ ಎಲ್ಲ ಸಂದರ್ಭದಲ್ಲಿ ಎಲ್ಲವೂ ಬೇಕು ಎನಿಸಿದರೂ ಯೋಚಿಸಿ ಯೋಜಿಸಿ ಹೊಸದನ್ನು ಪಡೆಯುವಲ್ಲಿ ಕಾಳಜಿ ವಹಿಸಬೇಕು. ಹಲವು ಬಾರಿ ರೈತರು ಮೋಸ ಹೋಗುವ ಸಂದರ್ಭಗಳಿವೆ. ಅದಕ್ಕೆ ಅವಕಾಶವಿಲ್ಲದಂತೆ ಕಾಳಜಿವಹಿಸಬೇಕು. ಹೊಸದನ್ನು ಅರಿತು ಅಳೆದು ತೂಗಿ ರೈತ ಮುನ್ನಡೆಯಬೇಕು ಎಂದರು.ಸಂವಾದ: ಸಂವಾದದಲ್ಲಿ ತೋಟಗಾರಿಕೆ ಬೆಳೆಗಳ ಆಗುಹೋಗು, ರೋಗ ರುಜಿನ, ಲಾಭ ನಷ್ಟ, ಆಧುನಿಕ ಸುಧಾರಿತ ಕೃಷಿ, ಔಷಧ ಹಾಗೂ ಸಸ್ಯ ವರ್ಧಕಗಳ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಸಂವಾದಲ್ಲಿ ಕೃಷಿಕರಾದ ಮಾಜಿ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಮಾರುತಿ ಶಿಡ್ಲಾಪೂರ, ಮಹೇಶ ಹೊಂಬಳ, ಸಿದ್ದಲಿಂಗೇಶ ವಳಸಂಗದ, ಶಿವಾಜಿ ಸಾಳುಂಕೆ, ಅಶೋಕ ಸಾಳುಂಕೆ, ಪ್ರಭುಗೌಡ ಪಾಟೀಲ, ಕೆ.ಡಿ.ನಾಗೋಜಿ, ಮೃತ್ಯುಂಜಯ ಲೂತಿಮಠ, ಸುರೇಶಗೌಡ್ರ ಪಾಟೀಲ, ಕೃಷ್ಣಾ ಗಾಜಿಪುರ ಸೇರಿದಂತೆ ರೈತರು ಚರ್ಚಿಸಿ ಹಲವು ವಿಷಯಗಳಿಗೆ ಪರಿಹಾರ ಕಂಡುಕೊಂಡರು.