ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ರೈಲು ಅಪಘಾತದ ಅಣಕು ಪ್ರದರ್ಶನ

| Published : May 17 2025, 01:43 AM IST

ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ರೈಲು ಅಪಘಾತದ ಅಣಕು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಒಳಗೇ ನುಗ್ಗಿ ಉಗ್ರರ ನೆಲೆ ಧ್ವಂಸ ಮಾಡಿದ ನಮ್ಮ ಸೇನೆಯು ಧೈರ್ಯ-ಶೌರ್ಯ ಪ್ರದರ್ಶನ ಮಾಡಿದ ನಂತರ ಪಾಕಿಸ್ತಾನ ಪ್ರತಿದಾಳಿ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸುವ ಮಾಕ್ ಡ್ರಿಲ್ ಆಯೋಜಿಸಲಾಗುತ್ತಿದೆ. ಮುಂದುವರಿದ ಭಾಗವಾಗಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲು ಅಪಘಾತ, ನಂತರದಲ್ಲಿ ಕೈಗೊಳ್ಳಬಹುದಾದ ರಕ್ಷಣಾ ಕಾರ್ಯಗಳ ಬಗ್ಗೆ ಅಣಕು ಪ್ರದರ್ಶನ ಮಾಡಿದ್ದು ಗಮನ ಸೆಳೆಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್‌ಪಿಎಫ್ ತುಕಡಿಗಳ ನೂರಾರು ಸಿಬ್ಬಂದಿ ಭಾಗಿಯಾಗಿ ಸುಮಾರು ಎರಡು-ಮೂರು ಗಂಟೆ ನೈಜ ಘಟನೆಯಂತೆಯೇ ಅಣಕು ಪ್ರದರ್ಶನ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪಹಲ್ಗಾಂನಲ್ಲಿ ಉಗ್ರರ ನರಮೇಧ ಬಳಿಕ ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ ಹೆಸರಿನ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲಾಗುತ್ತಿದೆ.

ಪಾಕಿಸ್ತಾನದ ಒಳಗೇ ನುಗ್ಗಿ ಉಗ್ರರ ನೆಲೆ ಧ್ವಂಸ ಮಾಡಿದ ನಮ್ಮ ಸೇನೆಯು ಧೈರ್ಯ-ಶೌರ್ಯ ಪ್ರದರ್ಶನ ಮಾಡಿದ ನಂತರ ಪಾಕಿಸ್ತಾನ ಪ್ರತಿದಾಳಿ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸುವ ಮಾಕ್ ಡ್ರಿಲ್ ಆಯೋಜಿಸಲಾಗುತ್ತಿದೆ. ಮುಂದುವರಿದ ಭಾಗವಾಗಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲು ಅಪಘಾತ, ನಂತರದಲ್ಲಿ ಕೈಗೊಳ್ಳಬಹುದಾದ ರಕ್ಷಣಾ ಕಾರ್ಯಗಳ ಬಗ್ಗೆ ಅಣಕು ಪ್ರದರ್ಶನ ಮಾಡಿದ್ದು ಗಮನ ಸೆಳೆಯಿತು.

ಪ್ರಯಾಣಿಕರ ರೈಲು ಹಳಿ ತಪ್ಪಿದರೆ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಪ್ರಾತ್ಯಕ್ಷಿಕೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಎರಡು ಭೋಗಿಗಳನ್ನು ಹಳಿ ತಪ್ಪಿಸಿ ಗಾಯಾಳುಗಳ ರಕ್ಷಣೆ, ತುರ್ತು ಚಿಕಿತ್ಸೆ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್‌ಪಿಎಫ್ ತುಕಡಿಗಳ ನೂರಾರು ಸಿಬ್ಬಂದಿ ಭಾಗಿಯಾಗಿ ಸುಮಾರು ಎರಡು-ಮೂರು ಗಂಟೆ ನೈಜ ಘಟನೆಯಂತೆಯೇ ಅಣಕು ಪ್ರದರ್ಶನ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ತಂಡಗಳೊಂದಿಗೆ ಮೈಸೂರು ವಿಭಾಗವೂ ವಿಪತ್ತು ನಿರ್ವಹಣಾ ಕಸರತ್ತಿಗೆ ಕೈ ಜೋಡಿಸಿತು. ನೈಋತ್ಯ ರೈಲ್ವೆ, ಮೈಸೂರು ವಿಭಾಗ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ರಾಜ್ಯ ಸರ್ಕಾರದ ಸಂಸ್ಥೆಗಳ ಸಹಯೋಗದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಸಂಪೂರ್ಣ ಪ್ರಮಾಣದ ವಿಪತ್ತು ನಿರ್ವಹಣಾ ಕಸರತ್ತು ನಡೆಸಿತು. ಈ ಮೂಲಕ ವಿಪತ್ತು ನಿರ್ವಹಣೆ ಹೇಗೆ ಎಂಬುದನ್ನು ಮನನ ಮಾಡಿತು. ರೈಲ್ವೆಯ ವಿವಿಧ ವಿಭಾಗಗಳ ಸಿಬ್ಬಂದಿಗೆ ತುರ್ತು ಪರಿಸ್ಥಿತಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಂಘಟಿತ ಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು. ವಿಪತ್ತು ನಿರ್ವಹಣೆಯು ಮಾನವ ಜೀವನ ಮತ್ತು ಆಸ್ತಿಯ ನಷ್ಟವನ್ನು ಕಡಿಮೆ ಮಾಡಲು ಅಥವಾ ತಡೆಗಟ್ಟಲು ಸಕಾಲಿಕ ಮತ್ತು ಸೂಕ್ತ ಪ್ರತಿಕ್ರಿಯೆ ಮತ್ತು ಸಹಾಯ ಒದಗಿಸುವ ಗುರಿ ಹೊಂದಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.

ಕಸರತ್ತಿನ ಭಾಗವಾಗಿ, ಟ್ರೈನ್ ಸಂಖ್ಯೆ ೧೬೨೫೨ (ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್) ನ ಒಂದು ಎಸಿ ಕೋಚ್ ಮತ್ತು ಒಂದು ಸ್ಲೀಪರ್ ಕ್ಲಾಸ್ ಕೋಚ್ ಅರಸೀಕೆರೆ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಕಿ.ಮೀ. ೧೫೭/೨೩-೨೫ ರಲ್ಲಿ ಬೆಳಿಗ್ಗೆ ೧೦.೩೦ರ ಸುಮಾರಿಗೆ ಹಳಿತಪ್ಪಿ ಪಲ್ಟಿಯಾದಂತೆ ತೋರಿಸಲಾಯಿತು.

ಕೃತಕ ಘಟನೆ ಮಾಹಿತಿ ಸಿಕ್ಕ ತಕ್ಷಣ, ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸೈರನ್, ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿದರು. ಎನ್‌ಡಿಆರ್‌ಎಫ್ ತಂಡ ಮತ್ತು ಜಿಲ್ಲಾ ಅಗ್ನಿಶಾಮಕ ದಳ ಎಚ್ಚರಿಕೆ ಪಡೆದ ೨೦ ನಿಮಿಷಗಳ ಒಳಗೆ ಸ್ಥಳಕ್ಕೆ ಆಗಮಿಸಿದವು. ರೈಲ್ವೆ ಆಸ್ಪತ್ರೆ ವೈದ್ಯರು ಮತ್ತು ದಾದಿಯರನ್ನು ಒಳಗೊಂಡ ವೈದ್ಯಕೀಯ ತಂಡಗಳು, ಆ್ಯಂಬುಲೆನ್ಸ್‌ಗಳೊಂದಿಗೆ, ಎರಡು ಕೋಚ್‌ಗಳೊಳಗೆ ಸಿಲುಕಿಕೊಂಡಿದ್ದ ಸುಮಾರು ೨೫ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲು ಸ್ಥಳಾಂತರ ಮಾಡಿದವು. ಕಸರತ್ತಿನ ಸನ್ನಿವೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಯಿತು.

ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ರಾಮಕೃಷ್ಣ, ನೈರುತ್ಯ ರೈಲ್ವೆ ಮುಖ್ಯ ರೈಲ್ವೆ ಸುರಕ್ಷತಾ ಎಂಜಿನಿಯರ್‌ ಬಾಲಸುಂದರ್ ಪಿ, ಮೈಸೂರಿನ ಎಡಿಆರ್‌ಎಂ ವಿನಾಯಕ್ ಆರ್. ನಾಯಕ್ ಮತ್ತು ಇತರೆ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ವಹಿಸಿ ನಿರ್ದೇಶನ ನೀಡಿದರು. ಈ ಕಾರ್ಯಾಚರಣೆ ಸುಮಾರು ೧೨೦ ನಿಮಿಷ ಕಾಲ ನಡೆಯಿತು.

ಮಾನವ ಜೀವನ ಅಥವಾ ಮೂಲಸೌಕರ್ಯಕ್ಕೆ ಆಗುವ ಹಾನಿಯನ್ನು ಕನಿಷ್ಠಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ರೈಲ್ವೆ ಸಚಿವಾಲಯದ ನಿರ್ದೇಶನಗಳಿಗೆ ಅನುಗುಣವಾಗಿ, ಬಾಧಿತರ ಕಷ್ಟವನ್ನು ಕಡಿಮೆ ಮಾಡಲು ಮತ್ತು ತುರ್ತು ಪ್ರತಿಕ್ರಿಯೆಯನ್ನು ಸಮರ್ಥವಾಗಿ ಖಚಿತಪಡಿಸಿಕೊಳ್ಳಲು ತಡೆಗಟ್ಟುವ ಮತ್ತು ಸಿದ್ಧತಾ ಕ್ರಮಗಳಿಗೆ ಈ ಕಸರತ್ತಿನಲ್ಲಿ ಆದ್ಯತೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.