ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜನಪದ ಸಾಹಿತ್ಯದ ಮೂಲಕ ಜನರನ್ನು ಅಜ್ಞಾನದ ಕತ್ತಲಿನಿಂದ ಬೆಳಕಿಗೆ ಕೊಂಡೊಯ್ದವರಲ್ಲಿ ದೇವರಗುಡ್ಡರು, ಗಾರುಡಿಗರು, ನೀಲಗಾರ ಪರಂಪರೆ ಪ್ರಮುಖವಾಗಿದೆ ಎಂದು ಮೈಸೂರಿನ ಹಿರಿಯ ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಅಂಡ್ ರೇಂಜರ್ಸ್ ಹಾಗೂ ಅಭಿವ್ಯಕ್ತಿ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಜನಪದ ಓದುವಿಕೆ, ಕೇಳುವಿಕೆ, ಕವಿಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸಾಕಷ್ಟು ಜನಪದ ಸಾಹಿತ್ಯ, ಕಲೆಗಳು ನಶಿಸುವ ಹಂತದಲ್ಲಿವೆ. ವಿದ್ಯಾರ್ಥಿಗಳು ಒಳ್ಳೆಯ ವಿಚಾರಧಾರೆಗಳನ್ನು ಆರಿಸಿಕೊಂಡು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಜನಪದವನ್ನು ಪೋಷಿಸಿ ಬೆಳೆಸಬೇಕು. ಜನಪದ ಕಲೆಗಳಿಗೆ ಆದ್ಯತೆ ನೀಡಬೇಕು. ತಂದೆ ತಾಯಿ, ಶಿಕ್ಷಕರು ಮಕ್ಕಳಿಗೆ ಜನಪದ ಕಾವ್ಯದ ಮೌಲ್ಯವನ್ನು ತಿಳಿಸಿಕೊಡಬೇಕು ಎಂದರು.
ಪುರಾತನ ಕಾಲದಿಂದ ಸಾಕಷ್ಟು ಜನಪದ ಕಥೆ, ಕಾವ್ಯಗಳ ಮೂಲಕ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪುಣ್ಯಭೂಮಿ, ದಿವ್ಯಭೂಮಿ, ಶ್ರೇಷ್ಠಭೂಮಿ ನಮ್ಮ ಜಿಲ್ಲೆಯಾಗಿದೆ. ಹಲವಾರು ಜನಪದ ಕಾವ್ಯಗಳಿಗೆ ತಾಯಿನೆಲವಾದ ಚಾಮರಾಜನಗರದಲ್ಲಿ ಮಲೆಮಹದೇಶ್ವರ, ಮಂಟೇಸ್ವಾಮಿ ಹಾಗೂ ಬಿಳಿಗಿರಿರಂಗನಾಥಸ್ವಾಮಿ ಕಥಾರೂಪಕಗಳು ಹುಟ್ಟಿದವು. ಆದ್ದರಿಂದಲೇ ಚಾಮರಾಜನಗರ ಜಾನಪದ ಕಲೆಗಳ ತವರು ಹಾಗೂ ಜಾನಪದ ಸಾಹಿತ್ಯದ ತಾಯಿಬೇರು ಎಂಬ ಹೆಸರಿಗೆ ಸಾಕ್ಷಿಯಾಗಿದೆ ಎಂದರು.ದೇವರಗುಡ್ಡರು, ಜನಪದ ಗಾರುಡಿಗರು ನೀಲಗಾರು ಸಣ್ಣ ವಯಸ್ಸಿನಿಂದಲೇ ಗುರುಗಳ ಬಳಿ ಕಲಿತು ಗುರು ಪರಂಪರೆಯನ್ನು ಬೆಳಸುತ್ತಿದ್ದಾರೆ. ಗುರು ಪರಂಪರೆಯನ್ನು ಶಿಷ್ಯಂದಿರು ಬೆಳೆಸಿದ್ದಾರೆ. ಕರ್ನಾಟಕದಲ್ಲಿ 24 ಜನಪದ ಗಾಯನ ಪ್ರಾಕಾರಗಳಿವೆ. ಜನಪದ ಸಾಹಿತ್ಯಕ್ಕೆ ಮೂಲ ಇತಿಹಾಸವಿಲ್ಲ. ಜನಪದ ಜನರ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಕೇಳಿಸಿಕೊಂಡು ಬೆಳೆದುಬಂದಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿನ ಭಾಗದಲ್ಲಿ ಜನಪದ ಪರಂಪರೆ ದೊಡ್ಡದಾಗಿದ್ದು, ಜನಪದಕ್ಕೆ ಜಿಲ್ಲೆಯ ಕೊಡುಗೆ ಪ್ರಮುಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾಪಿ.ಎಸ್.ಗುರುಪ್ರಸಾದ್ ವಹಿಸಿದ್ದರು. ಇದೇ ವೇಳೆ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಆ್ಯಂಡ್ ರೇಂಜರ್ಸ್ ಹಾಗೂ ಅಭಿವ್ಯಕ್ತಿ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪಾರಿತೋಷಕ, ಸ್ಮರಣಿಕೆ ವಿತರಿಸಲಾಯಿತು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಮಿತಿಯ ಸಂಚಾಲಕ ಚಿನ್ಮಯ್ ಭಟ್, ಕ್ರೀಡಾ ಸಮಿತಿ ಸಂಚಾಲಕ ಬಿ.ಗಣೇಶ ಪ್ರಕಾಶ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಚಾಲಕ ಡಾ.ಜಿ ಮಲ್ಲೇಶ, ಎಂ.ಕೆ.ಮಂಜುನಾಥ, ರೇಂಜರ್ಸ್ ಮತ್ತು ಅಭಿವ್ಯಕ್ತಿ ಸಮಿತಿಯ ಎಂ.ಚಂದ್ರಕಲಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ, ರೋವರ್ಸ್ ಸಮಿತಿ ಸಂಚಾಲಕ ಡಾ.ಪಿ.ಎಂ.ನಾಗೇಂದ್ರ ಕುಮಾರ್, ಪತ್ರಾಂಕಿತ ವ್ಯವಸ್ಥಾಪಕಿ ವಿ.ಕೆ.ಪೂರ್ಣಿಮಾ, ಕನ್ನಡ ವಿಭಾಗದ ಎ.ಎಂ.ಶಿವಸ್ವಾಮಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.