ಕೊಪ್ಪಳ: ಕಾರ್ಖಾನೆಗಳಿಂದ ಬಾಧಿತ ಗ್ರಾಮಗಳ ಪಾಡು ಹೇಳತೀರದಾಗಿದೆ. ತಂತ್ರಜ್ಞರ ಶಿಫಾರಸ್ಸನ್ನಾದರೂ ಜಾರಿ ಮಾಡುವಂತೆ ಮುಖ್ಯಮಂತ್ರಿಗಳ ಬಳಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಮನವರಿಕೆ ಮಾಡೋಣ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರಸಭೆ ಆವರಣದಲ್ಲಿ ನಡೆದಿರುವ ಬಲ್ಡೋಟ ತೊಲಗಿಸಿ ಹೋರಾಟದ ೧೨೨ನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಖಾನೆ ಬಾಧೆಗೊಳಗಾದ ಜನರ ಕಷ್ಟ ಕಾರ್ಪಣ್ಯ ಹೇಳತೀರದು.ತಂತ್ರಜ್ಞರ ವರದಿ ಹೇಳಿದ್ದನ್ನು ಜಾರಿ ಮಾಡಿ ಎಂದು ಕೇಳೋಣ. ಹಿಂದಿನ ತಪ್ಪು ಸರಿಪಡಿಸಿಕೊಳ್ಳುವ ಸಮಯ ಈಗ ಬಂದಿದೆ. ಜನಜಾಗೃತಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬಂದ್ ಹೋರಾಟದಲ್ಲಿ ಮಹಿಳೆಯರು ತೋರಿಸಿದ ಆವೇಶ ಸಾತ್ವಿಕವಾಗಿತ್ತು. ಅವರ ನೋವಿಗೆ ಪಕ್ಷಾತೀತವಾಗಿ ಮಿಡಿದು ನಾವೆಲ್ಲ ಮುಂದೆ ನಿಂತು ಸರ್ಕಾರದ ಮನವೊಲಿಸಿ ಈ ಬಲ್ಡೋಟ ತೊಲಗಿಸೋಣ. ಜನರು ಎದ್ದು ನಿಂತರೆ ಎಂತಹ ದೊಡ್ಡ ಸಮಸ್ಯೆಯಾದರೂ ಪರಿಹಾರ ಸಿಗುತ್ತದೆ ಎಂದರು.

ಇತ್ತೀಚಿಗೆ ದೇವನಹಳ್ಳಿ ಭೂಸ್ವಾಧೀನ ವಿರೋಧಿಸಿದ ಹೋರಾಟ ಗೆದ್ದಿತು. ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ. ಇದನ್ನು ಅಷ್ಟಕ್ಕೆ ಬಿಡಲ್ಲ. ಸದ್ಯದಲ್ಲೇ ಸರ್ವ ಪಕ್ಷಗಳ ಮುಖಂಡರು ಮತ್ತು ಜಂಟಿ ಕ್ರಿಯಾ ವೇದಿಕೆ ಮುಖಂಡರು ಇರುವ ನಿಯೋಗ ಕೊಂಡೊಯ್ದು ಮುಖ್ಯಮಂತ್ರಿಗಳಲ್ಲಿ ಸ್ಪಷ್ಟವಾಗಿ ಮನವಿ ಮಾಡೋಣ ಎಂದರು.

ಮಾಜಿ ಜಿಪಂ ಅಧ್ಯಕ್ಷ ಗುರುಮೂರ್ತಿ ಸ್ವಾಮಿ ಅಳವಂಡಿ ಮಾತನಾಡಿ, ಇದು ನಮ್ಮ ರಾಜಕಾರಣಿಗಳಿಗೆ ದೊಡ್ಡ ವಿಷಯವಲ್ಲ. ಇಷ್ಟು ಸಮಸ್ಯೆ ಎದುರಿಸಿ ಕಾರ್ಖಾನೆ ಮಾಲೀಕರನ್ನು ಬೆಳೆಸಿ ನಮ್ಮ ಜನರು ರೋಗಬಾಧೆ, ಜೀವ ಸಂಕಟ ಯಾಕೆ ತೆಗೆದುಕೊಳ್ಳಬೇಕು. ಪಕ್ಷಾತೀತವಾಗಿ ರಾಜಕೀಯ ಮುಖಂಡರು ಕೂಡಿ ಕಾರ್ಖಾನೆ ತೊಲಗಿಸಿ, ಜನರ ಆರೋಗ್ಯ ಕಾಪಾಡಿ ಎಂದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಹೋರಾಟಕ್ಕೆ ಜನರು ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರಬೇಕು. ಈ ಹೋರಾಟ ಗೆಲುವು ಅಂದರೆ ನಮ್ಮ ಜೀವದ ಉಳಿವು. ಮುಂದಿನ ಭವಿಷ್ಯದ ಉಳಿವು ಎಂದರು.


ಧರಣಿಗೆ ಇಪ್ಪತ್ತು ವರ್ಷ ಬಲ್ಡೋಟ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಡಿದ ಸೂರ್ಯರೆಡ್ಡಿ, ನ್ಯಾಯವಾದಿ ರಾಜು ಬಾಕಳೆ ಹೋರಾಟ ಅನುಭವ ಹಂಚಿಕೊಂಡರು. ಸಾಹಿತಿ ವಿರೂಪಾಕ್ಷಪ್ಪ ಕೋರಗಲ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಸ್.ಪಾಟೀಲ್, ಭೂ ಬಾಧಿತ ಎಸ್. ನಾರಾಯಣರೆಡ್ಡಿ, ಕೃಷ್ಣ ಬೇವಿನಕಟ್ಟಿ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ ಮತ್ತು ಮಂಜುನಾಥ ಜಿ.ಗೊಂಡಬಾಳ, ಭಾಗ್ಯನಗರ ಗ್ಯಾನೇಶ ಹ್ಯಾಟಿ, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಪಿ.ಎಸ್. ಹಿರೇಮಠ, ಜಿ.ಬಿ.ಪಾಟೀಲ್, ಪುಟ್ಟರಾಜ ಪಾಟೀಲ್, ಶರಣು ಶೆಟ್ಟರ್, ಶೇಖರ್ ಎಸ್. ಇಂಗಳದಾಳ, ನಾಗರಾಜ ಕುಷ್ಟಗಿ, ರವಿ ಕಾಂತನವರ, ಮಲ್ಲಿಕಾರ್ಜುನಗೌಡ ಅಣ್ಣಿಗೇರಿ, ಗಾಳೆಪ್ಪ ಪೂಜಾರ, ವಿನಯ ಸಜ್ಜನ್, ಬಿ.ಜಿ. ಕರಿಗಾರ, ಶಿವರಾಜ ಕನಕಗಿರಿ, ಕಾಶಪ್ಪ ಚಲವಾದಿ, ಹನುಮಪ್ಪ ಚಿಂಚಲಿ, ರತ್ನಮ್ಮ ದೊಡ್ಡಮನಿ, ಯಮನೂರಪ್ಪ ಹಾಲಳ್ಳಿ, ಶರಣು ಗಡ್ಡಿ, ವೈ.ಸತ್ಯನಾರಾಯಣ, ಮಹಾದೇವಪ್ಪ ಮಾವಿನಮಡು, ಆಟೋ ಮಂಜಪ್ಪ, ವಿಜಯ ಮಹಾಂತೇಶ ಹಟ್ಟಿ, ಯಂಕಪ್ಪ ಡೊಳ್ಳಿನ, ಟಿ ಕೊಟ್ರೇಶ್ ಗಂಗಮ್ಮ ಕೊಡೇಕಲ್, ಶಿವಪ್ಪ ಜಲ್ಲಿ ಇತರರಿದ್ದರು.