ಜಿ. ಸೋಮಶೇಖರ್
ಕೊಟ್ಟೂರು: ಪಟ್ಟಣದ ಕೆರೆಗೆ ನೀರುಣಿಸುವ ಯೋಜನೆಗೆ ಬರುವ ರಾಜ್ಯ ಬಜೆಟ್‌ನಲ್ಲಿ ಅನುದಾನ ದೊರಕೀತೆ? ಎನ್ನುವ ಉತ್ಕಟ ನಿರೀಕ್ಷೆಯನ್ನು ತಾಲೂಕಿನ ಜನತೆ ಹೊಂದಿದ್ದಾರೆ.ಬಟಾಬಯಲು ಪ್ರದೇಶವಾದ ಕೊಟ್ಟೂರು ತಾಲೂಕು ಸಂಪೂರ್ಣ ಮಳೆಯಾಶ್ರಿತ ಕೃಷಿ ಹೊಂದಿದೆ. ಯಾವುದೇ ನೀರಾವರಿ ಸೌಲಭ್ಯ ಇಲ್ಲವೇ ಇಲ್ಲ. ಕೊಟ್ಟೂರು ಕೆರೆ ಸೇರಿದಂತೆ ಇತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಾವಾಗ ಜಾರಿಗೆ ಆಗುವುದೋ ಎಂದು ಇಲ್ಲಿನ ರೈತರು ಕಳೆದ ದಶಕಗಳಿಂದ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಮಳೆಯನ್ನೇ ನೆಚ್ಚಿಕೊಂಡು ತಾಲೂಕಿನ ರೈತರು ಕೃಷಿಯಿಂದ ಬದುಕು ಕಟ್ಟಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಕೆರೆಗೆ ನೀರುಣಿಸುವ ಯೋಜನೆ ಜಾರಿಯಾದರೆ ಈ ಭಾಗದ ಕೃಷಿ ಭೂಮಿಗಳು ಸಂಪದ್ಭರಿತ ಪ್ರದೇಶಗಳಾಗಿ ಹೊರ ಹೊಮ್ಮಲಿವೆ.
2018ರಲ್ಲಿ ತಾಲೂಕು ಕೇಂದ್ರವಾದ ಕೊಟ್ಟೂರು ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದಾಗಿ ಶೈಕ್ಷಣಿಕವಾಗಿ ಹೆಚ್ಚು ಹೆಸರು ಮಾಡತೊಡಗಿದೆ. ಸರ್ಕಾರ ಪ್ರೌಢಶಾಲೆಗಳು, ಪಿಯುಸಿ ಕಾಲೇಜುಗಳು ಮಾತ್ರ ಇದ್ದು, ಇಡೀ ತಾಲೂಕಿಗೆ ಒಂದೇ ಒಂದು ಸರ್ಕಾರಿ ಪದವಿ ಕಾಲೇಜು ಈ ವರೆಗೂ ಇಲ್ಲವಾಗಿರುವುದು ತಾಲೂಕಿನ ದೊಡ್ಡ ಕೊರತೆ.ಸರ್ಕಾರಿ ಪದವಿ ಕಾಲೇಜು ಬೇಡಿಕೆ ಇದ್ದರೂ ಕನಿಷ್ಠ ಮಹಿಳೆ ಪದವಿ ಪೂರ್ವ ಕಾಲೇಜು ಆದರೂ ಆರಂಭಿಸುವ ಕಾಳಜಿ ಸರ್ಕಾರಕ್ಕೆ ಇದುವರೆಗೂ ಇಲ್ಲವಾಗಿರುವುದು ಕೊಟ್ಟೂರು ತಾಲೂಕಿನ ಬಗ್ಗೆ ಸರ್ಕಾರ ಅದೆಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ವ್ಯಕ್ತವಾಗಿದೆ.
3 ಜಿಪಂ ಕ್ಷೇತ್ರ 8 ತಾಪಂ ಕ್ಷೇತ್ರ ಮತ್ತು 14 ಗ್ರಾಪಂಗಳಿಗೆ ಸಣ್ಣ ತಾಲೂಕು ಕೇಂದ್ರವಾಗಿ ಕೊಟ್ಟೂರು ಇದ್ದು 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಕೊಟ್ಟೂರು ಪಟ್ಟಣಕ್ಕೆ ರೈಲ್ವೆ ಸಂಪರ್ಕವಿದೆ. ಬೆರಳೆಣಿಕೆಯ ರೈಲು ಸಂಚಾರ ಮಾತ್ರ ಆಗುತ್ತಿದ್ದು, ಬಹು ಬಗೆಯ ರೈಲ್ವೆ ಸಂಚಾರ ಆರಂಭವಾಗಬೇಕೆಂಬ ಜನತೆಯ ಬೇಡಿಕೆ ಈಡೇರುತ್ತಿಲ್ಲ. ತಾಲೂಕು ಕೇಂದ್ರಕ್ಕೆ ಅವಶ್ಯವಾಗಿ ಬೇಕಿರುವ ಸಾರಿಗೆ ಬಸ್ ಡಿಪೋ ಮತ್ತಿತರ ಸೇವೆಗಳ ಕಚೇರಿಗಳು ಇನ್ನು ಬೇಡಿಕೆಗಳಾಗಿ ಉಳಿದುಕೊಂಡಿವೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ಗ್ರಾಮಗಳ ಪರಿಸ್ಥಿತಿಯಂತೂ ಮತ್ತಷ್ಟು ಗಂಭೀರವಾಗಿದೆ. ಬೋರ್‌ಗಳನ್ನು ಅಳವಡಿಸಿಕೊಂಡರೆ ಪ್ಲೋರೈಡ್‌ಯುಕ್ತ ನೀರು ದೊರಕಿಸಿಕೊಳ್ಳಬಹುದೇ ಹೊರತು ಶುದ್ಧ ಕುಡಿಯುವ ನೀರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವಕಾಶವೇ ಇಲ್ಲ. ಹೀಗಾಗಿ ಇಡೀ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಸ್ವಲ್ಪಮಟ್ಟಿಗೆ ಸ್ಥಳೀಯ ಆಡಳಿತ ಜನತೆಗೆ ಆಸರೆಯಾಗಿದೆ. ಇದರ ಬದಲು ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾದರೆ ಮಾತ್ರ ತಾಲೂಕಿನ ನೀರಿನ ಬಾಯಾರಿಕೆ ತೀರಬಹುದು.
ಕೊಟ್ಟೂರು ಸೇರಿದಂತೆ ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಒತ್ತಾಯಿಸಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತ ಬಂದಿದ್ದರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಈ ಯೋಜನೆ ಜಾರಿಗೊಳಿಸಲು ಮುಂದಾಗದೇ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಬಜೆಟ್‌ನಲ್ಲಿ ಆದರೂ ಈ ಯೋಜನೆಗೆ ಅನುದಾನ ಘೋಷಣೆ ಆಗಬೇಕೆಂದು ಮತ್ತೊಮ್ಮೆ ಒತ್ತಾಯಿಸಿರುವೆ ಎನ್ನುತ್ತಾರೆ ಶಾಸಕ ಕೆ.ನೇಮರಾಜ ನಾಯ್ಕ.