ಗದಗ: ಆಡಳಿತವೆಂದರೆ ಅಧಿಕಾರಿಗಳು ಕೇವಲ ಎಸಿ ರೂಮಿನಲ್ಲಿ ಕುಳಿತು ಫೈಲುಗಳಿಗೆ ಸಹಿ ಮಾಡುವುದಲ್ಲ, ಅದು ಜನರ ಕಣ್ಣೀರು ಒರೆಸುವ ಕಾಯಕವಾಗಬೇಕು ಎಂದು ಹೇಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶುಕ್ರವಾರ ಸತತ 11 ತಾಸುಗಳ ಕಾಲ ಜನತಾ ದರ್ಶನ ನಡೆಸಿ ಗಮನ ಸೆಳೆದರು.

ಶುಕ್ರವಾರ ಬೆಳಗ್ಗೆ 10.30ಕ್ಕೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜನತಾ ದರ್ಶನ ಪ್ರಾರಂಭಿಸಿದ ಸಚಿವರು, ರಾತ್ರಿ 9.30ರ ವರೆಗೆ ಸತತ 11 ಗಂಟೆಗಳ ಕಾಲ ನಿರಂತರ ಜನರ ಅಹವಾಲು ಆಲಿಸಿದರು.

7 ತಾಲೂಕುಗಳಿಂದ ​ಸ್ವೀಕೃತಿಯಾಗಿದ್ದ 1067 ಅರ್ಜಿಗಳಲ್ಲಿ ನೇರವಾಗಿ 767, ಆನ್ ಲೈನ್ ಮೂಲಕ 300 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 900 ಅರ್ಜಿಗಳು ಇತ್ಯರ್ಥವಾದವು. ಎಲ್ಲ ಅರ್ಜಿಗಳನ್ನು ವಿಚಾರಣೆ ಮಾಡಿ, ಇತ್ಯರ್ಥಪಡಿಸುವುದಕ್ಕೆ ಈ ಜನತಾ ದರ್ಶನದಲ್ಲಿ ಗಂಭೀರ ಪಯತ್ನ ನಡೆಯಿತು.

​150 ಜಟಿಲ ಪ್ರಕರಣಗಳು: 150 ಜಟಿಲ ಪ್ರಕರಣಗಳು ಬಂದಿದ್ದು, ಅವುಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲು‌ ಸಾಧ್ಯವಾಗದ ರೀತಿ ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಸುದೀರ್ಘ ಚರ್ಚೆ ಮಾಡಿ ಅರ್ಜಿ ಸಲ್ಲಿಸಿದವರಿಗೆ ಕೇವಲ ಸ್ಪಷ್ಟೀಕರಣ ಮಾತ್ರ ನೀಡಿದ್ದಾರೆ.

​ಅರ್ಜಿ ಸಲ್ಲಿಕೆಯಾದ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೇ ಕರೆಸಿ ವಿವರಣೆ ಕೇಳಲಾಯಿತು. ​ಸಮಸ್ಯೆ ಪರಿಹಾರಕ್ಕೆ ವಿಳಂಬ ಮಾಡುತ್ತಿದ್ದ ಅಧಿಕಾರಿಗಳಿಗೆ ಸಚಿವರು ವೇದಿಕೆಯ ಮೇಲೆಯೇ ಕ್ಲಾಸ್ ತೆಗೆದುಕೊಂಡರು.


ಬದುಕಿನ ಆಶಯ: ​ಜನಸಾಮಾನ್ಯರ ಅಹವಾಲು ಎಂದರೆ ಅದು ಬರೀ ಕಾಗದದ ತುಣುಕಲ್ಲ, ಅದು ಅವರ ಬದುಕಿನ ಆಶಯ. ಅದನ್ನು ನಿರ್ಲಕ್ಷಿಸುವ ಅಧಿಕಾರಿಗಳಿಗೆ ಈ ಜಿಲ್ಲೆಯಲ್ಲಿ ಜಾಗವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಇಸಿದರು.