ಯುವಶಕ್ತಿಯಿಂದ ಸಮಾಜದ ಪರಿವರ್ತನೆ ಸಾಧ್ಯ: ಮಾಜಿ ಸಚಿವ ಎಚ್.ಎಂ.ರೇವಣ್ಣ

| Published : Feb 12 2024, 01:31 AM IST / Updated: Feb 12 2024, 04:50 PM IST

ಎಚ್.ಎಂ.ರೇವಣ್ಣ
ಯುವಶಕ್ತಿಯಿಂದ ಸಮಾಜದ ಪರಿವರ್ತನೆ ಸಾಧ್ಯ: ಮಾಜಿ ಸಚಿವ ಎಚ್.ಎಂ.ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನರಲ್ಲಿರುವ ಹೋರಾಟದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಮಾಜಿ ಸಚಿವ ಎಚ್ .ಎಂ.ರೇವಣ್ಣ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವಜನರಲ್ಲಿರುವ ಹೋರಾಟದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಮಾಜಿ ಸಚಿವ ಎಚ್ .ಎಂ.ರೇವಣ್ಣ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ‘ಜನಪರ ಸಾಹಿತ್ಯ ಪರಿಷತ್’ನ ವತಿಯಿಂದ ನಡೆದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರ ಹೋರಾಟಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಯುವಜನರಲ್ಲಿ ಹೋರಾಟದ ಮನಸ್ಸು, ಧ್ಯೇಯ ಮತ್ತು ಕಿಚ್ಚು ಹೆಚ್ಚಿರುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ. ಯುವಸಮೂಹವನ್ನು ಕಡೆಗಣಿಸಿ ಹಲವು ಸರ್ಕಾರಗಳು ಉರುಳಿ ಬಿದ್ದಿರುವ ಇತಿಹಾಸವಿದೆ.ಆದ್ದರಿಂದ ಯುವಶಕ್ತಿಯು ದೇಶದ ಮುಖ್ಯ ಶಕ್ತಿ ಎಂದು ಹೇಳಿದರು.

ಭಾರತದ ಇಡೀ ರಾಜಕೀಯ ಚಿತ್ರಣ ಬದಲಿಸಿದ ಜಯಪ್ರಕಾಶ್ ನಾರಾಯಣ್, ಗಾಂಧಿಜೀಯವರು, ಸ್ವಾಮಿ ವಿವೇಕಾನಂದರು ಯುವಜನರ ಮೂಲಕ ಚಳವಳಿಗೆ ಕರೆ ನೀಡಿ ಯಶಸ್ವಿಯಾದವರು. ಯುವಶಕ್ತಿಯಲ್ಲಿ ಹೋರಾಟಗಳಿಗೆ ಸ್ಪಂದಿಸುವ ಮನೋಭಾವವಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲು ಎಷ್ಟೇ ಸಂಘಟನೆಗಳಿದ್ದರೂ ಸಾಲದು. 

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪ್ರಚಾರ ಮಾಡುವ ದಿಕ್ಕಿನಲ್ಲಿ, ಮತ್ತಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡುವ ಜರೂರತ್ತಿದೆ ಎಂದರು.

ಸಾಹಿತ್ಯ ಜನಸಾಮಾನ್ಯರ ದನಿಯಾಗಬೇಕು. ಅವರ ನೋವುಗಳ ಪ್ರತಿಫಲಿಸಬೇಕು. ಜೊತೆಗೆ ಬೆನ್ನೆಲುಬಾಗಿ ಕಾಯಬೇಕು. ಇದಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಶ್ರಮಿಕರ ಪರವಾಗಿದೆ. ಜನರನ್ನು ಒಗ್ಗೂಡಿಸುವ ಕಾಯಕ ಮಾಡುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಪ್ರಭಾವತಿ ಪ್ರತಿಭಾ ಪುರಸ್ಕಾರ ವಿತರಿಸಿದರು.

ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಸಾಹಿತಿ ಡಾ. ಲಿಂಗದಹಳ್ಳಿ ಹಾಲಪ್ಪ, ಪರಿಷತ್ತಿನ ಗೌರವಾಧ್ಯಕ್ಷ ಡಾ.ಡಿ. ರವಿ, ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್. ಸುರೇಶ್, ಸಹ ಪ್ರಾಧ್ಯಾಪಕ ಡಾ.ಆರ್. ನಾಗಭೂಷಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಎಸ್. ಶಿವರಾಜಪ್ಪ (ಸಾಹಿತ್ಯ), ಅಂಶಿ ಪ್ರಸನ್ನಕುಮಾರ್ (ಮಾಧ್ಯಮ), ಎಂ. ಮಹದೇವಸ್ವಾಮಿ, ಡಾ.ಡಿ.ಕೆ. ರವಿಶಂಕರ್ (ವಿಜ್ಞಾನ), ಡಾ.ಆರ್. ನಾಗಭೂಷಣ್ (ಉನ್ನತ ಶಿಕ್ಷಣ), ಗುರುಬಸಪ್ಪ (ಆರಕ್ಷಕ), ಎನ್. ದೊಡ್ಡಯ್ಯ, ಆರ್. ನಾಗರಾಜು, ಮತ್ತು ಪಿ.ವೈ. ಶಾರದಾ (ಸಂಘಟನೆ).

ಎಂ.ಸಿ. ಬೋರೇಗೌಡ, ಇ. ಕಂದವೇಲು ಮತ್ತು ಎ. ದೇವಮ್ಮಣಿ, ಡಿ.ಪಿ. ಚಿಕ್ಕಣ್ಣ (ಸಾಹಿತ್ಯ) ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ನಡುವೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರಂಜಿ ನಡೆಯಿತು.