ಚಿಕ್ಕಮಗಳೂರುರಾಷ್ಟ್ರದಲ್ಲಿ ನೈಜ ಪರಿವರ್ತನೆ ತರುವ ನಾಯಕತ್ವದ ಗುಣ ನೇತಾಜಿ ಸುಭಾಶ್ಚಂದ್ರ ಬೋಸರ ಕನಸಾಗಿತ್ತು. ಅವರು ದೇಶಕ್ಕೆ ಬೇಕಾದ ರಕ್ಷಣಾತ್ಮಕ ಮನೋಭಾವವನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡಿದ್ದವರು ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ವಿಶ್ಲೇಷಿಸಿದರು.

- ಕಾದಂಬರಿಕಾರ ಡಾ.ಜಿ.ಬಿ.ಹರೀಶ ಅವರ ಮಹಾಕಾಲ-2 ಕಾದಂಬರಿ ಲೋಕಾ ರ್ಪಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರದಲ್ಲಿ ನೈಜ ಪರಿವರ್ತನೆ ತರುವ ನಾಯಕತ್ವದ ಗುಣ ನೇತಾಜಿ ಸುಭಾಶ್ಚಂದ್ರ ಬೋಸರ ಕನಸಾಗಿತ್ತು. ಅವರು ದೇಶಕ್ಕೆ ಬೇಕಾದ ರಕ್ಷಣಾತ್ಮಕ ಮನೋಭಾವವನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡಿದ್ದವರು ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ವಿಶ್ಲೇಷಿಸಿದರು. ನಗರದ ಬಸವನಹಳ್ಳಿ ಶ್ರೀ ಶಂಕರಮಠದಲ್ಲಿ ನಾದ ಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆ, ನಿವೃತ್ತ ಸೈನಿಕರ ಸಂಘದ ಆಶ್ರಯದಲ್ಲಿ ಭಾನುವಾರ ಸಾಹಿತಿ, ಚಿಂತಕ, ಕಾದಂಬರಿಕಾರ ಡಾ.ಜಿ.ಬಿ.ಹರೀಶ ಅವರ ಮಹಾಕಾಲ-2 ಕಾದಂಬರಿ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದೇಶಕ್ಕೆ ಅಗತ್ಯ ರಕ್ಷಣಾ ತಂತ್ರದ ಅಗತ್ಯತೆಯ ಕಲ್ಪನೆ ಚಿಕ್ಕಂದಿನಿಂದಲೂ ನೇತಾಜಿ ಅವರಲ್ಲಿತ್ತು. ತುಂಬ ಸುಸಂಸ್ಕೃತ ಹಾಗೂ ಶ್ರೀಮಂತ ಕುಟುಂಬದಿಂದ ಬಂದ ಅವರು ಚಿಕ್ಕಂದಿನಿಂದಲೂ ಕ್ರಾಂತಿಕಾರಕ ವಿಚಾರಗಳಿರುವ ಪುಸ್ತಕಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಎಲ್ಲವುಗಳ ಬಗ್ಗೆ ಡಾ.ಜಿ.ಬಿ.ಹರೀಶ ವಿರಚಿತ ಮಹಾಕಾಲ-2 ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದರು.ಸುಮಾರು ಏಳು ವರ್ಷಗಳಿಗೂ ಹೆಚ್ಚು ಕಾಲ ಇಡೀ ದೇಶಾದ್ಯಂತ ನೇತಾಜಿಯವರ ಬಗ್ಗೆ ಇರುವ ಸಾಹಿತ್ಯವನ್ನು, ಇತಿಹಾಸಕಾರರ ಉಲ್ಲೇಖಗಳನ್ನು ಸಂಗ್ರಹಿಸಿ ವಿದೇಶಿ ಪ್ರವಾಸಿಗರು ಅಥವಾ ವಿದೇಶೀಯ ಆಧುನಿಕ ಚರಿತ್ರಕಾರರು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆದಿರುವ ಅನೇಕ ಸಂಗತಿಗಳನ್ನು ಅವಲೋಕಿಸಿ ಈ ಕಾದಂಬರಿ ರಚಿಸಿದ್ದಾರೆ. ಕನ್ನಡದ ಮಟ್ಟಿಗೆ ಈ ರಚನೆ ಒಂದು ಅದ್ಭುತ ಮತ್ತು ಮೊದಲ ದಾಖಲೆ. ಈ ಸಂಶೋಧನಾ ಕೃತಿ ಏಕಕಾಲಕ್ಕೆ ನಮ್ಮ ದೇಶದ ಚರಿತ್ರೆ ಮತ್ತೆ ಕಟ್ಟಬೇಕು ಎನ್ನುವ ಒತ್ತಾಯ ನಮ್ಮ ಚರಿತ್ರೆಕಾರರ ಮೇಲೆ ಹೇರುವ ಆಗಿದೆ. ಮುಂದಿನ ಜನಾಂಗಕ್ಕೆ ನಮ್ಮ ರಾಷ್ಟ್ರೀಯ ನಾಯಕರನ್ನು ಹೇಗೆ ಬಿಂಬಿಸಲಾಗಿದೆ. ಅವರನ್ನು ನಾವು ವಾಸ್ತವದಲ್ಲಿ ಹೇಗೆ ಪರಿಭಾವಿಸಬೇಕಾಗಿತ್ತು ಅನ್ನುವ ಮಾರ್ಗದರ್ಶಿ ಕೃತಿಯೂ ಇದಾಗಿದೆ ಎಂದರು. ಕೃತಿ ಲೋಕಾರ್ಪಣೆ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಡಾ.ಜಿ.ಬಿ.ಹರೀಶ ವರ್ತಮಾನದಲ್ಲಿರುವ ರಾಷ್ಟ್ರೀಯ ವೈಚಾರಿಕ ಮನಸ್ಥಿತಿಯ ಸಾಹಿತಿ. ಉತ್ತಮ ವಿಮರ್ಶಕ. ಅವರು ತಮ್ಮದೇ ಧಾಟಿಯಲ್ಲಿ ಡಾ.ಅಂಬೇಡ್ಕರ್ ಬಗ್ಗೆ, ಸಂವಿಧಾನದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ವಿಮರ್ಶೆ ಮಾಡಿರುವುದನ್ನು ಕೇಳಿರುವುದಾಗಿ ಹೇಳಿದರು.

ಕೃತಿಕರ್ತೃ ಡಾ.ಜಿ.ಬಿ.ಹರೀಶ ಮಾತನಾಡಿ, ಸತ್ಯ ಯಾವತ್ತಿದ್ದರೂ ಅನಾವರಣವಾಗಲೇಬೇಕು. ಸುಭಾಶ್ಚಂದ್ರ ಬೋಸರ ಕುರಿತಾದ ಅನೇಕ ಊಹಾಪೋಹಗಳಿಗೆ ಈ ಕೃತಿ ಉತ್ತರ ನೀಡುತ್ತದೆ. ಜಗತ್ತಿನಲ್ಲಿ ಮಹಿಳಾ ಸೈನ್ಯವಿಲ್ಲದ ಆ ಕಾಲದಲ್ಲೇ ಮಹಿಳಾ ಸೈನ್ಯವನ್ನು ಕಟ್ಟಿದ್ದವರು. ಸುಭಾಶ್ಚಂದ್ರ ಬೋಸರು ಇದ್ದಿದ್ದರೆ ಪಾಕಿಸ್ತಾನ ವಿಭಜನೆಯೇ ಆಗುತ್ತಿರಲಿಲ್ಲ ಎನ್ನುವ ಮಾತು ಸ್ವತಃ ಜಿನ್ನಾನಿಂದಲೇ ಕೇಳಿ ಬಂದಿತ್ತು. ಬೋಸರಿಗೆ ಬ್ರಿಟಿಷರಿಗಿಂತ ಅಹಿಂಸಾವಾದಿ ನಾಯಕರಿಂದಲೇ ವಿರೋಧ ವಿತ್ತು ಎಂದರಲ್ಲದೆ, ಕಳೆದ 7 ವರ್ಷಗಳಿಂದ ಅವರ ಕುರಿತು ಅನೇಕ ದೇಶ-ವಿದೇಶಗಳ ಅತ್ಯಮೂಲ್ಯ ದಾಖಲೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಕಾದಂಬರಿ ರೂಪದಲ್ಲಿ ಈ ಕೃತಿ ರಚಿಸಿರುವುದಾಗಿ ತಿಳಿಸಿದರು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್, ಅಧ್ಯಕ್ಷತೆ ವಹಿಸಿದ್ದ ನಾದ ಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆಯ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್ ಮಾತನಾಡಿದರು. ನಾದ ಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆ ಖಜಾಂಚಿ ರೇಖಾ ಪ್ರೇಮ್‌ಕುಮಾರ್ ಸ್ವಾಗತಿಸಿದರು.30 ಕೆಸಿಕೆಎಂ 4ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಶ್ರೀ ಶಂಕರಮಠದಲ್ಲಿ ಭಾನುವಾರ ಸಾಹಿತಿ, ಕಾದಂಬರಿಕಾರ ಡಾ.ಜಿ.ಬಿ.ಹರೀಶ ಅವರ ಮಹಾ ಕಾಲ- 2 ಕಾದಂಬರಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಲೋಕಾರ್ಪಣೆ ಮಾಡಿದರು.