ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಸ್ತುತ ಏರಿಕೆಯಾಗಿರುವ ಜಾಗತಿಕ ತಾಪಮಾನ ಕಡಿಮೆ ಮಾಡಲು ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮೂಲ ಮಾರ್ಗ, ಆದ್ದರಿಂದ ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ ರಸ್ತೆ ಬದಿ ಮರಗಳ ಸಮೀಕ್ಷೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮಂಡ್ಯದ 7 ವಲಯಗಳಲ್ಲಿರುವ ನರ್ಸರಿಗಳಲ್ಲಿ ತೇಗ, ಶ್ರೀಗಂಧ, ಹೊನ್ನೆ ಇತ್ಯಾದಿ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಬೇಕು. ಈಗಾಗಲೇ ವಿತರಿಸಿದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಿದರು.

ಜಿಲ್ಲೆಯ ಹಲವೆಡೆ ಚಿರತೆಗಳ ಸಮಸ್ಯೆ ಪರಿಹಾರಕ್ಕೆ ತತ್ ಕ್ಷಣವೇ ಕ್ರಮ ವಹಿಸಬೇಕು. ಕಾಡಂಚಿನ ಗ್ರಾಮಗಳ ಜನರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡರೆ ಕಾಡ್ಗಿಚ್ಚು, ಕಳ್ಳಬೇಟೆ, ಅಕ್ರಮ ಮರ ಕಡಿಯುವಂಥ ಅಪರಾಧಗಳ ಬಗ್ಗೆ ತಕ್ಷಣದ ಮಾಹಿತಿ ಲಭಿಸುತ್ತದೆ. ಆಗಲೇ ವನ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದರು.

ಜಿಯೋ ಟ್ಯಾಗ್ ಮಾಡಲು ಸೂಚನೆ:


ಅರಣ್ಯ, ಕಾಡಂಚಿನಲ್ಲಿರುವ ಪಟ್ಟಾ ಜಮೀನು, ಸರ್ಕಾರಿ ಜಾಗದಲ್ಲಿ ಬೆಳೆದಿರುವ ಶ್ರೀಗಂಧ, ರಕ್ತ ಚಂದನ, ಬೀಟೆ ಮತ್ತು ತೇಗದ ಮರಗಳ ಜಿಯೋ ಟ್ಯಾಗ್ ಮಾಡುವ ಮೂಲಕ ಯಾವುದೇ ಬೆಲೆ ಬಾಳುವ ವೃಕ್ಷ ಕಳುವಾಗದಂತೆ ಸಂರಕ್ಷಿಸಬೇಕು ಎಂದು ತಿಳಿಸಿದರು.

ಮಂಡ್ಯ ನಗರದಲ್ಲಿ ಮನೆಯ ಮುಂದೆ, ರಸ್ತೆ ಬದಿಯಲ್ಲಿ ಬೆಳೆದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂಬ ಆರೋಪಗಳಿವೆ. ಮರಗಳ ಗಣತಿ ನಡೆಸಲು ಮತ್ತು ಅಕ್ರಮವಾಗಿ ಮರ ಕಡಿಯದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿ ಸೆಕ್ಷನ್ 4ರ ಪ್ರಾಥಮಿಕ ಅಧಿಸೂಚನೆ ಆಗಿ ವರ್ಷಗಳೇ ಕಳೆದಿದ್ದರೂ ಸೆಕ್ಷನ್ 17 ಅಡಿಯಲ್ಲಿ ಅರಣ್ಯ ಎಂದು ಘೋಷಣೆ ಆಗಿಲ್ಲ. ಎಲ್ಲೆಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.) ಇಲ್ಲವೋ ಅಲ್ಲಿಗೆ ಪ್ರಸ್ತಾವನೆ ಸಲ್ಲಿಸಿದರೆ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿಸಿದರು.

ಅದೇ ರೀತಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಹೊರತು ಪಡಿಸಿ ಉಳಿದ ಎಲ್ಲ ಒತ್ತುವರಿ ಹಾಗೂ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದರು. ಆನೆ- ಮಾನವ ಸಂಘರ್ಷ ನಿಯಂತ್ರಿಸಲು ಈ ತಿಂಗಳಲ್ಲೇ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕ ಹಾಗೂ ಸೌರಬೇಲಿ ಕುರಿತಂತೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಪ್ರಭುಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.