ಶಿಕ್ಷಣದ ಮೂಲಕ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ: ಶಾಸಕ ಜೆ.ಎನ್. ಗಣೇಶ್

| Published : Sep 18 2025, 01:10 AM IST

ಶಿಕ್ಷಣದ ಮೂಲಕ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ: ಶಾಸಕ ಜೆ.ಎನ್. ಗಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತ್ಯುತ್ಸವ ಬುಧವಾರ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತ್ಯುತ್ಸವ ಬುಧವಾರ ಜರುಗಿತು.

ಕಾರ್ಯಕ್ರಮಕ್ಕೆ ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿ ಮಾತನಾಡಿ, ವಿಶ್ವಕರ್ಮ ಸಮಾಜವು ಶ್ರಮಶೀಲ ಮತ್ತು ಪ್ರತಿಭಾವಂತ ಸಮುದಾಯ. ಶಿಕ್ಷಣದ ಮೂಲಕವೇ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯವಾಗಲಿದ್ದು, ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೈಜೋಡಿಸಿದರೆ ವಿಶ್ವಕರ್ಮ ಸಮುದಾಯವು ನಾನಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲಿದೆ. ಪಟ್ಟಣದಲ್ಲಿ ವಿಶ್ವಕರ್ಮ ಪರಂಪರೆಯ ಶಿಲ್ಪಿ ಜಕಣಾಚಾರಿಯವರ ಹೆಸರಿನಲ್ಲಿ ವೃತ್ತವನ್ನು ನಿರ್ಮಿಸಲಾಗುವುದು. ಮುಂದಿನ ಪುರಸಭೆ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದ ಪ್ರತಿನಿಧಿಗಳಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು.

ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ. ಮೌನೇಶ್ ಮಾತನಾಡಿ, ವಿಶ್ವಕರ್ಮನು ಲೋಕದ ಅಪ್ರತಿಮ ಶಿಲ್ಪಿ, ಅದ್ಭುತ ಎಂಜಿನಿಯರ್. ದೇವತೆಗಳಿಗೆ ಮಂದಿರಗಳು, ದೇವಾಲಯಗಳು, ಅಸ್ತ್ರ-ಶಸ್ತ್ರಗಳು, ರಥ-ವಾಹನಗಳನ್ನು ತಯಾರಿಸಿದ ವಿಶ್ವಕರ್ಮನು ಶಿಲ್ಪಕಲೆಯ ಶಾಶ್ವತ ಚಿಹ್ನೆ. ಆದ್ದರಿಂದ ಸರ್ಕಾರಿ ಕಟ್ಟಡಗಳಿಗೆ ಜಕಣಾಚಾರಿ ಹೆಸರಿಡಬೇಕು. ಜೊತೆಗೆ ಸಮಾಜದ ಕಲ್ಯಾಣಕ್ಕಾಗಿ ಶಿಲ್ಪಾಕಲಾ ಭವನವನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಶ್ವಕರ್ಮ ಆನೆಗುಂದಿ ಸಂಸ್ಥಾನಮಠದ ಜಗದ್ಗುರು ಶ್ರೀ ಕಾಳಹಸ್ತೇಂದ್ರಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಜೊತೆ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಇದನ್ನು ಹಿಂಪಡೆಯಬೇಕು. ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮುದಾಯದವರು ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ಹಾಗೂ ವೃತ್ತಿಯಲ್ಲಿ ಕುಲಕಸಬು ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಲೇಬೆನ್ನೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಿರುವ ಚಂಡಿಕಾಹೋಮ, ಉಚಿತ ಸದಸ್ಯತ್ವ ಅಭಿಯಾನ ಹಾಗೂ ಉಚಿತ ವಧುವರರ ಮಾಹಿತಿ ಕಾರ್ಯಕ್ರಮಗಳ ಕರಪತ್ರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ. ರುದ್ರಪ್ಪಾಚಾರ್, ಪ್ರಮುಖರಾದ ಡಿ.ಕಾಳಾಚಾರಿ, ಚಂದ್ರಶೇಖರಾಚಾರಿ, ಗುರುಮೂರ್ತಿ, ರಾಘವೇಂದ್ರ, ಅಳ್ಳಳ್ಳಿ ಮೌನೇಶ, ಮೆಟ್ರಿ ವೀರಭದ್ರಪ್ಪಾಚಾರ್, ನಾರಾಯಣಾಚಾರ್, ರವಿ, ಭರತ್ ಸೇರಿದಂತೆ ಮಹಿಳಾ ನಾಯಕಿಯರಾದ ವೀಣಾ, ವಿಜಯಲಕ್ಷ್ಮಿ, ವನಜಾಕ್ಷಿ, ಗಿರಿಜಾ, ಜಯಶ್ರೀ, ವಸಂತಿ, ಕಲಾವತಿ ಸೇರಿ ಇತರರಿದ್ದರು.