ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371ಜೆ ವರದಾನ

| Published : Sep 18 2025, 01:10 AM IST

ಸಾರಾಂಶ

ಭಾರತದ ಒಕ್ಕೂಟ ವ್ಯವಸ್ಥೆಗೆ ಹೈ-ಕ ಸೇರ್ಪಡೆಗೆ ನಿಜಾಮ ಒಪ್ಪದ ಹಿನ್ನೆಲೆಯಲ್ಲಿ ಅಂದಿನ ಕೇಂದ್ರ ಸರ್ಕಾರದ ಗೃಹಮಂತ್ರಿ ಸರ್ದಾರ ವಲ್ಲಭಬಾಯಿ ಪಟೇಲರು ಆಪರೇಷನ್ ಪೋಲೋ ಮಿಲಿಟರಿ ಕಾರ್ಯಾಚರಣೆ ನಡೆಸಿ ನಿಜಾಮನ ಬಂಧಿಸುವ ಮೂಲಕ ಈ ಪ್ರದೇಶದ ಜನಸಾಮಾನ್ಯರಿಗೆ ಸ್ವಾತಂತ್ರ್ಯ ನೀಡುವಲ್ಲಿ ಯಶಸ್ವಿಯಾದರು.

ಕನಕಗಿರಿ:

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371-ಜೆ ಕಲಂ ವರದಾನವಾಗಿದೆ ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೭೮ನೇ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಬುಧವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ೧೩ ತಿಂಗಳ ನಂತರ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ದೊರೆತಿರುವುದರಿಂದ ಅಭಿವೃದ್ಧಿಯಲ್ಲಿ ಈ ಪ್ರದೇಶ ಹಿಂದುಳಿಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ೩೭೧(ಜೆ) ಜಾರಿಗೊಳಿಸಿತು. ಇದರಿಂದ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ. ಇನ್ನೂ ರಾಜ್ಯ ಸರ್ಕಾರದಿಂದ ಆರು ಜಿಲ್ಲೆಗಳ ವಿಕಾಸಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವುದನ್ನು ಸ್ಮರಿಸಿದರು.

ಉಪನ್ಯಾಸಕ ಶಿವಪುತ್ರಪ್ಪ ಗಳಪೂಜೆ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆಗೆ ಹೈ-ಕ ಸೇರ್ಪಡೆಗೆ ನಿಜಾಮ ಒಪ್ಪದ ಹಿನ್ನೆಲೆಯಲ್ಲಿ ಅಂದಿನ ಕೇಂದ್ರ ಸರ್ಕಾರದ ಗೃಹಮಂತ್ರಿ ಸರ್ದಾರ ವಲ್ಲಭಬಾಯಿ ಪಟೇಲರು ಆಪರೇಷನ್ ಪೋಲೋ ಮಿಲಿಟರಿ ಕಾರ್ಯಾಚರಣೆ ನಡೆಸಿ ನಿಜಾಮನ ಬಂಧಿಸುವ ಮೂಲಕ ಈ ಪ್ರದೇಶದ ಜನಸಾಮಾನ್ಯರಿಗೆ ಸ್ವಾತಂತ್ರ್ಯ ನೀಡುವಲ್ಲಿ ಯಶಸ್ವಿಯಾದರು. ನಿಜಾಮನ ಸರ್ವಾಧಿಕಾರದ ವಿರುದ್ಧ ರಮಾನಂದ ತೀರ್ಥರ ನೇತೃತ್ವದಲ್ಲಿ ಆರಂಭವಾದ ಹೋರಾಟ ಯಶಸ್ವಿ ಕಂಡಿತು ಎಂದರು.

ಪೊಲೀಸ್ ಇಲಾಖೆಯಿಂದ ಧ್ವಜವಂದನೆ ಸಲ್ಲಿಸಲಾಯಿತು. ಸ್ವಚ್ಛೋತ್ಸವ ಕುರಿತು ಪ್ರತಿಜ್ಞಾ ಬೋಧಿಸಲಾಯಿತು. ಪ್ರಧಾನಮಂತ್ರಿ ಆವಾಸ್ ಯೋಜನೆ ೨.೦(ನಗರ) ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಅಂಗೀಕಾರ ಆಂದೋಲನಕ್ಕೆ ಚಾಲನೆ ದೊರಕಿತು.

ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ತಾಪಂ ಇಒ ಕೆ. ರಾಜಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಸಿಆರ್‌ಪಿ ರಾಜೀವ್, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಸದಸ್ಯರಾದ ಶೇಷಪ್ಪ ಪೂಜಾರ, ಅನಿಲ ಬಿಜ್ಜಳ, ತಹಸೀಲ್ದಾರ್‌ ಕಚೇರಿ ಹಾಗೂ ಪಪಂ ಸಿಬ್ಬಂದಿ ಇದ್ದರು. ಶಿಕ್ಷಕಿ ದೀಪಾ ಗಡಗಿ ನಿರೂಪಿಸಿದರೇ ಶಿಕ್ಷಕ ಶಾಮೀದಸಾಬ್‌ ಲಯನ್ದಾರ ವಂದಿಸಿದರು. ಹೈ-ಕ ಪ್ರದೇಶವನ್ನು ಹೇಗಾದರೂ ಮಾಡಿ ಭಾರತದ ಒಕ್ಕೂಟ ವ್ಯವಸ್ಥೆ ಸೇರ್ಪಡೆಗೊಳಿಸಬೇಕೆಂಬ ಕೆಚ್ಚೆದೆಯಿಂದ ಹೋರಾಡಿದ ಕನಕಗಿರಿಯ ಜಯತೀರ್ಥ ರಾಜಪುರೋಹಿತ, ಮರಿಯಪ್ಪ ಭತ್ತದ ಅವರ ಹೋರಾಟ ಅವಿಸ್ಮರಣೀಯ. ಇಂತಹ ಪುಣ್ಯಭೂಮಿಯಲ್ಲಿ ಧ್ವಜಾರೋಹಣ ನೆರವೇರಿಸುವುದಕ್ಕೆ ಪುಣ್ಯ ಮಾಡಿರುವೆ. ವಿಶ್ವನಾಥ ಮುರುಡಿ ತಹಸೀಲ್ದಾರ್‌