ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆ ಅತ್ಯಂತ ಸೂಕ್ತ ಸ್ಥಳವಾಗಿದ್ದು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ಅದರ ಅಂಗಸಂಸ್ಥೆಗಳ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಕುರಂದವಾಡ ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ, ಕೈಗಾರಿಕಾ, ವಾಣಿಜ್ಯ ಹಾಗೂ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಸರ್ಕಾರದ ದೂರದೃಷ್ಟಿಯ ನಿರ್ಧಾರ ಸ್ವಾಗತಾರ್ಹ. ಕರ್ನಾಟಕದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯನ್ನು ನಿರ್ಧರಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ಕಾರಿಡಾರ್‌ ಯೋಜನೆಯಾದ ಚೆನ್ನೈ-ಬೆಂಗಳೂರು ಕೈಗಾರಿಕ ಕಾರಿಡಾರ್‌ನ ಪ್ರಮುಖ ಬೆಳವಣಿಗೆ ಕೇಂದ್ರಗಳಲ್ಲಿ ತುಮಕೂರು ಒಂದಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಈ ಕೈಗಾರಿಕಾ ಕಾರಿಡಾರ್‌ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದರು.2 ಸಾವಿರ ಎಕರೆಗೂ ಅಧಿಕ ಸರ್ಕಾರ ಭೂಮಿ ಲಭ್ಯ

ಟಿಡಿಸಿಸಿಐ ಮಾಜಿ ಅಧ್ಯಕ್ಷ ಸುಜ್ಞಾನ ಹಿರೇಮಠ ಮಾತನಾಡಿ, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ಪ್ರದೇಶದಲ್ಲಿ ಈಗಾಗಲೇ 2 ಸಾವಿರ ಎಕರೆಗೂ ಅಧಿಕ ನಿರಂತರ ಸರ್ಕಾರ ಭೂಮಿ ಲಭ್ಯವಿದೆ. ಇದರಿಂದ ಭೂಸ್ವಾಧೀನದ ಅಗತ್ಯವು ಬಹುತೇಕ ಇಲ್ಲದಂತಾಗುತ್ತದೆ. ಪುನರ್ವಸತಿ ಸಮಸ್ಯೆಗಳು, ನ್ಯಾಯಾಂಗ ವ್ಯಾಜ್ಯಗಳ ಹಾಗೂ ಯೋಜನಾ ವಿಳಂಬಗಳು ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕ ಹಣದ ಉಳಿತಾಯದೊಂದಿಗೆ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.ಕರ್ನಾಟಕದ ಮಧ್ಯ,ಉತ್ತರ ಹಾಗೂ ಪಶ್ಚಿಮ ಭಾಗಗಳ 17 ಜಿಲ್ಲೆಗಳಿಗೆ ತುಮಕೂರು ಪ್ರವೇಶ ದ್ವಾರವಾಗಿದೆ. ಆದ್ದರಿಂದ ಈ ವಿಮಾನ ನಿಲ್ದಾಣವು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿಶಾಲ ಪ್ರದೇಶದ ಜನತೆಗೆ ಹಾಗೂ ಕೈಗಾರಿಕೆಗಳಿಗೆ ಸೇವೆ ಸಲ್ಲಿಸಲಿದೆ. ರಾಷ್ಟ್ರೀಯ ಹೆದ್ದಾರಿ-48, ರಾಷ್ಟ್ರೀಯ ಹೆದ್ದಾರಿ-206, ಇತರೆ ಪ್ರಮುಖ ಹೆದ್ದಾರಿಗಳು, ವ್ಯಾಪಕ ರಾಜ್ಯ ಹೆದ್ದಾರಿ ಜಾಲ ಹಾಗೂ ಬೆಂಗಳೂರು-ಉತ್ತರ ಕರ್ನಾಟಕ-ಮಹಾರಾಷ್ಟ್ರ-ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳು ತುಮಕೂರಿಗೆ ಅತ್ಯುತ್ತಮ ಸಂಪರ್ಕವನ್ನು ಒದಗಿಸಿವೆ. ಇದು ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿ ಬೆಳೆಯಲು ಅತ್ಯಂತ ಅನುಕೂಲಕರವಾಗಿದೆ ಎಂದು ಹೇಳಿದರು. ಟಿ.ಆರ್.ಲೋಕೇಶ್, ಸುರೇಂದ್ರ ಎ. ಷಾ ಮಾತನಾಡಿದರು. ತುಮಕೂರು ಬಳಿಯ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮೂಲಸೌಕರ್ಯ ಸಮಿತಿ ಅಧ್ಯಕ್ಷ ಜಿ.ಆರ್. ಸುರೇಶ್, ಮಾಜಿ ಅಧ್ಯಕ್ಷ ಸಾಗರನಹಳ್ಳಿ ಪ್ರಭು, ತುಮಕೂರು ಟ್ಯಾಕ್ಸ್ ಪ್ರಾಕ್ಟಿಶಿಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್‌ರಾವ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಮಾಜಿ ಅದ್ಯಕ್ಷ ರಾಮಮೂರ್ತಿ, ಟಿಡಿಸಿಸಿಐ ನಿರ್ದೇಶಕರಾದ ಮಲ್ಲೇಶಯ್ಯ, ಆನಂದಕುಮಾರ್, ರವಿಕುಮಾರ್, ಬಸವರಾಜ ಹಿರೇಮಠ, ತುಮಕೂರು ರೈಸ್ ಮಿಲ್ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು.