ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

| Published : May 18 2024, 12:34 AM IST

ಸಾರಾಂಶ

ಮೃತರನ್ನು ಕಂಡೆಕೊಡ್ಲು ಗ್ರಾಮದ ಪಾರ್ವತಿ ಶಂಕರ ನಾಯ್ಕ(೩೫) ಹಾಗೂ ಸೂರಜ್ ಪಾಂಡು ನಾಯ್ಕ(೧೭) ಎಂದು ಗುರುತಿಸಲಾಗಿದೆ.

ಭಟ್ಕಳ: ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಬಾಲಕ ಮತ್ತು ಮಹಿಳೆ ಸೇರಿ ಇಬ್ಬರು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಮೃತರನ್ನು ಕಂಡೆಕೊಡ್ಲು ಗ್ರಾಮದ ಪಾರ್ವತಿ ಶಂಕರ ನಾಯ್ಕ(೩೫) ಹಾಗೂ ಸೂರಜ್ ಪಾಂಡು ನಾಯ್ಕ(೧೭) ಎಂದು ಗುರುತಿಸಲಾಗಿದೆ.

ಕಂಡೆಕೊಡ್ಲು ನಿವಾಸಿಗಳಾದ ಐವರು ಕಡವಿನಕಟ್ಟೆ ಡ್ಯಾಂ ಕೆಳಭಾಗದಲ್ಲಿ ರೈಲ್ವೆ ಸೇತುವೆಯ ಬಳಿಯಲ್ಲಿನ ಹೊಳೆಯ ನೀರಿನಲ್ಲಿ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಈಜುತ್ತಿದ್ದ ಸೂರಜ್ ಪಾಂಡು ನಾಯ್ಕ(೧೭) ಈತ ನೀರಿನಲ್ಲಿ ಆಯತಪ್ಪಿ ಮುಳುಗಿದ್ದನ್ನು ಗಮನಿಸಿದ ದಡದಲ್ಲಿದ್ದ ಪಾರ್ವತಿ ಶಂಕರ ನಾಯ್ಕ(೩೫) ಎನ್ನುವ ಮಹಿಳೆಯು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ದುರಾದೃಷ್ಟ ಎನ್ನುವಂತೆ ಆತನನ್ನು ರಕ್ಷಿಸಲು ಆಕೆಗೆ ಸಾಧ್ಯವಾಗಿಲ್ಲ, ಈಕೆಯು ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಮೃತದೇಹ: ತಕ್ಷಣ ಊರಿನವರು ಎಲ್ಲರೂ ಒಟ್ಟಾಗಿ ನೀರಿನಲ್ಲಿ ಮುಳುಗಿದ್ದ ಇಬ್ಬರನ್ನೂ ರಕ್ಷಣೆ ಮಾಡಿದರಾದರೂ ಆಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಸ್ಮಶಾನ ಮೌನ: ಕಂಡೆಕೊಡ್ಲು ಗ್ರಾಮ ಅತಿ ಚಿಕ್ಕಗ್ರಾಮವಾಗಿದ್ದು, ಕೆಲವೇ ಕೆಲವು ಮನೆಗಳಿವೆ. ಈ ಗ್ರಾಮದಲ್ಲಿ ಇಬ್ಬರು ಸಾವಿಗೀಡಾಗಿರುವುದು ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ಇಬ್ಬರ ಸಾವಿಗೆ ಮರುಗುತ್ತಿದೆ. ನೂರಾರು ಜನರು ಆಸ್ಪತ್ರೆಯ ಆವರಣಕ್ಕೆ ಆಗಮಿಸಿ ಮೃತರನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಮರುಗಿದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿಯಲ್ಲಿ ವ್ಯಕ್ತಿ ಕಾಣೆ: ದೂರು ದಾಖಲು

ಶಿರಸಿ: ವ್ಯಕ್ತಿಯೊಬ್ಬರು ಕಾಣೆಯಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಗಾಂಧಿನಗರದ ಹುಲಿಯಪ್ಪನಗುಡ್ಡದ ಶಿವರಾಯ ಹನುಮಂತಪ್ಪ ದೇಸಾಯಿ(೪೨) ಕಾಣೆಯಾದ ವ್ಯಕ್ತಿ. ಇವರು ಮೇ ೧೫ರಂದು ನನ್ನನ್ನು ಮತ್ತು ಮಗನನ್ನು ಬೈಕ್‌ನಿಂದ ನಗರದ ಡ್ರೈವರ್‌ಕಟ್ಟೆಯ ಬಳಿ ಇಳಿಸಿ, ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು, ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಪತ್ನಿ ನಾಗರತ್ನ ಶಿವರಾಯ ದೇಸಾಯಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆಗೆ ತನಿಖೆ ಕೈಗೊಂಡಿದೆ.