ಅನುಮತಿ ಇಲ್ಲದೆ ಕೆರೆ ಹೂಳು ಎತ್ತಿದ್ರೆ ಕ್ರಮ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : May 18 2024, 12:34 AM IST

ಅನುಮತಿ ಇಲ್ಲದೆ ಕೆರೆ ಹೂಳು ಎತ್ತಿದ್ರೆ ಕ್ರಮ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿ, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೆರೆಯ ಹೂಳು ಹಾಗೂ ಮಣ್ಣನ್ನು ಪ್ರಾಧಿಕಾರದ ಅನುಮತಿ ಇಲ್ಲದೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆರೆ ಹೂಳು ಹಾಗೂ ಮಣ್ಣಿನ ಅನಧಿಕೃತ ಸಾಗಾಣಿಕೆ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿ, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸಿದರು.

ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳು ಅರ್ಜಿ ಪರಿಶೀಲಿಸಿ, ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು, ಮಣ್ಣಿನ ಅಂದಾಜು ಪಟ್ಟಿ ತಯಾರಿಸಿ, ಕೆರೆಯ ಯಾವ ಭಾಗದಲ್ಲಿ ಹೂಳು, ಮಣ್ಣನ್ನು ಎತ್ತುವಳಿ ಮಾಡತಕ್ಕದ್ದು ಎಂಬ ನಕಾಶೆ ಉಳ್ಳ ವಿಸ್ತೃತ ಯೋಜನಾ ವರದಿಯೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸುತ್ತವೆ ಎಂದರು.

ಗ್ರಾಮ ಪಂಚಾಯಿತಿಯ ಪ್ರಾಧಿಕಾರ ಉಳ್ಳ ಕೆರೆಗಳಲ್ಲಿ ಹೂಳು, ಮಣ್ಣು ತೆಗೆಯಲು ಅನುಮತಿ ಕೋರಿದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅನುಮೋದನೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಡಿಪಿಆರ್ ತಯಾರಿಸಿ ಪ್ರಸ್ತಾವನೆಯನ್ನು ಗಣಿ, ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಸೂಕ್ತ ತೀರುವಳಿಗಳು ಹಾಗೂ ದಾಖಲಾತಿಗಳೊಂದಿಗೆ ಸ್ವೀಕೃತಗೊಂಡ ಪ್ರಸ್ತಾವನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲಿಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994, ತಿದ್ದುಪಡಿ ನಿಯಮಗಳು 2023ರಂತೆ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ ಮತ್ತು ಇನ್ನಿತರೆ ಶುಲ್ಕಗಳ ನಿಗದಿಪಡಿಸಿ, ಕಾರ್ಯಾದೇಶ ನೀಡಿ, ಕಾರ್ಯಾದೇಶವನ್ನು ಐ.ಎಲ್.ಎಂ.ಎಸ್.‌ ತಂತ್ರಾಂಶದಲ್ಲಿ ನೋಂದಣಿ ಮಾಡಿ ಮಣ್ಣು ಸಾಗಾಣಿಕೆ ಮಾಡಲು ಖನಿಜ ಸಾಗಾಣಿಕೆ ಪರವಾನಗಿ ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಿಯಮಾನುಸಾರ ಹಾಗೂ ಕ್ರಮಬದ್ಧವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾರ್ಯಾನುಮತಿ ಪಡೆದು ಕೆರೆಗಳಲ್ಲಿ ಹೂಳು, ಮಣ್ಣು ಎತ್ತುವಳಿ ಕೈಗೊಳ್ಳುವಂತೆ, ತಪ್ಪಿದಲ್ಲಿ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಹಾಗೂ ಸಾಗಾಣಿಕೆಯಲ್ಲಿ ತೊಡಗಿರುವ ವಾಹನಗಳನ್ನು ಜಪ್ತಿ ಮಾಡಿ ದಂಡ ಸಹಿತವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೆರೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಎಎಸ್ಪಿ ಕಾರ್ಯಪ್ಪ, ಹಿರಿಯ ಭೂ ವಿಜ್ಞಾನಿ ನವೀನ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಾದೇಶ ಪಡೆಯಿರಿ

ಹೂಳು ಮತ್ತು ಮಣ್ಣು ತೆಗೆಯಲು ಈ ವಿಧಾನವನ್ನು ಕ್ರಮಬದ್ಧವಾಗಿ ಪಾಲನೆ ಮಾಡದೇ, ನಿಯಮಾನುಸಾರ ಕಾರ್ಯಾದೇಶ ಪಡೆಯದೇ, ಜಿಲ್ಲೆಯಾದ್ಯಂತ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ ಅಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ