ಪುತ್ತೂರು ಶಾಸಕ ಅಶೋಕ್‌ ರೈ ‘ಜನರತ್ತ ನಡಿಗೆ’ ವಿನೂತನ ಕಾರ್ಯಕ್ರಮ

| Published : May 18 2024, 12:34 AM IST

ಸಾರಾಂಶ

ಪುತ್ತೂರು ಅಭಿವೃದ್ಧಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಗಳು ಏನು? ಇನ್ನಿತರ ಪ್ರಶ್ನೆಗಳನ್ನು ಇಟ್ಟುಕೊಂಡು ಶಾಸಕರು ಮಾತುಕತೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಒಂದು ವರ್ಷದ ಕಾರ್ಯವೈಖರಿಯ ಬಗ್ಗೆ ಹಾಗೂ ಸಾಧನೆ ಮತ್ತು ಪ್ರಗತಿಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಕಳೆದ ಎರಡು ದಿನಗಳಿಂದ ‘ಜನರತ್ತ ನಡಿಗೆ’ ವಿನೂತನ ಕಾರ್ಯಕ್ರಮ ಆರಂಭಿಸಿದ್ದಾರೆ. ಶಾಸಕನಾಗಿ ನನ್ನ ಕೆಲಸ ಹೇಗಿದೆ? ತೃಪ್ತಿ ಇದೆಯೇ? ತಿದ್ದಿಕೊಳ್ಳಬೇಕೇ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಜನಾಭಿಪ್ರಾಯ ಪಡೆಯುತ್ತಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರಿನ ಪ್ರಗತಿಪರ ಕೃಷಿಕರು, ವಿವಿಧ ಪಕ್ಷಗಳ ಮುಖಂಡರು ಮತ್ತು ಉದ್ಯಮಿಗಳ ಮನೆ, ಕಚೇರಿಗಳಿಗೆ ತೆರಳಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಸೇರ್ಪಡೆಯಾಗಿ ಶಾಸಕರಾದ ಅವರು ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಮತದಾರರ ಮನ ಗೆಲ್ಲುವುದರ ಜೊತೆಗೆ ಇತರ ಪಕ್ಷದವರಿಂದಲೂ ಸೈ ಎನಿಸಿಕೊಳ್ಳಲು ಹಲವಾರು ಪ್ರಯತ್ನ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಇದೀಗ ತನ್ನ ಪರೀಕ್ಷೆಯನ್ನು ತಾನೇ ನಡೆಸುವ ಪ್ರಯತ್ನದಲ್ಲಿದ್ದಾರೆ. ಎಲ್ಲ ಧರ್ಮೀಯರ ಮುಖಂಡರು, ಉದ್ಯಮಿಗಳು, ಕೃಷಿಕರು, ವಿಶೇಷವಾಗಿ ಬಿಜೆಪಿಯ ಮುಖಂಡರ ಬಳಿಯೂ ತೆರಳಿ ತಮ್ಮ ಸಾಧನೆಯ ಬಗ್ಗೆ ಫೀಡ್ ಬ್ಯಾಕ್ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಅವರೊಂದಿಗೆ ಚರ್ಚೆ ನಡೆಸಿ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಪುತ್ತೂರಿನ ಬಿಜೆಪಿ ಮುಖಂಡರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಗೋಪಾಲಕೃಷ್ಣ ಹೇರಳೆ, ಪ್ರಗತಿ ಪರ ಕೃಷಿಕ ಸೇಡಿಯಾಪು ಜನಾರ್ಧನ ಭಟ್, ಪುತ್ತೂರು ಮಾಯ್ದೆ ದೇವುಸ್ ಚರ್ಚ್ನ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನ್ಹಸ್, ಸ್ವರ್ಣೋದ್ಯಮಿಗಳಾದ ಬಲರಾಮ ಆಚಾರ್ಯ, ಮುಳಿಯ ಕೇಶವ ಪ್ರಸಾದ್, ಉದ್ಯಮಿಗಳಾದ ಸತ್ಯಶಂಕರ್ ಕೆ., ಟಿಂಬರ್ ಉದ್ಯಮಿ ಮಹಮ್ಮದ್ ಹಾಜಿ, ಜವುಳಿ ಉದ್ಯಮಿ ಪ್ರಕಾಶ್ ಕಾಮತ್, ಸಂಜಯ್ ಕಾಮತ್, ಗಿರಿಧರ್ ಶೆಟ್ಟಿ, ಶಿವಶಂಕರ್ ಶೆಟ್ಟಿ, ಕೆ.ಪಿ. ಮೊಹಮ್ಮದ್ ಸಾಧಿಕ್ ಆಕರ್ಷಣ್, ದೇವಪ್ಪ ಗೌಡ ರಂಗಾಯನಕಟ್ಟೆ ಮತ್ತಿತರ ಬಳಿಗೆ ತೆರಳಿ ಅವರಿಂದ ತನ್ನ ಸೇವಾಕಾರ್ಯಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡಿಕೊಂಡಿದ್ದಾರೆ.

ಶಾಸಕರ ಪ್ರಶ್ನಾವಳಿ: ಜನರ ಬಳಿಗೆ ಹೋಗುತ್ತಿರುವಾಗ ಶಾಸಕರು ತನ್ನ ಪರೀಕ್ಷೆ ನಡೆಸಿಕೊಳ್ಳಲು ತಯಾರಿಸಿದ ಪ್ರಶ್ನಾವಳಿಗಳು ಹೀಗಿದೆ. ನಾನು ಶಾಸಕನಾದ ಬಳಿಕ ನನ್ನ ನಡಿಗೆ ಹೇಗಿದೆ? ಜನರೊಂದಿಗೆ ಬೆರೆಯುವ ರೀತಿ, ನನ್ನಲ್ಲಿ ಏನಾದರೂ ತಪ್ಪಾಗಿದೆಯೇ? ನಾನು ತಿದ್ದಿಕೊಳ್ಳುವಂತಹ ವಿಚಾರ ಏನಾದರೂ ಇದೆಯೇ? ಪುತ್ತೂರು ಅಭಿವೃದ್ಧಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಗಳು ಏನು? ಇನ್ನಿತರ ಪ್ರಶ್ನೆಗಳನ್ನು ಇಟ್ಟುಕೊಂಡು ಶಾಸಕರು ಮಾತುಕತೆ ನಡೆಸಿದ್ದಾರೆ. ನನ್ನಲ್ಲಿ ತಪ್ಪು ಒಪ್ಪುಗಳಿದ್ದರೆ ತಿಳಿಸಿ ಮುಂದೆ ಸರಿಪಡಿಸಿಕೊಳ್ಳುತ್ತೇನೆ ಎಂದು ಅವರು ಅಭಿಪ್ರಾಯ ಕೇಳಿ ತನ್ನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.