ಉಡುಪಿ ಕೃಷ್ಣ ಮಠ ರಥಬೀದಿಯಲ್ಲಿ ಮೃಣ್ಮಯ ಕೃಷ್ಣನ ರಥೋತ್ಸವ

| Published : Sep 16 2025, 12:04 AM IST

ಉಡುಪಿ ಕೃಷ್ಣ ಮಠ ರಥಬೀದಿಯಲ್ಲಿ ಮೃಣ್ಮಯ ಕೃಷ್ಣನ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಭಕ್ತಿ ಪರಾಕಾಷ್ಟೆಯಿಂದ ಕೃಷ್ಣನ ಹುಟ್ಟಹಬ್ಬವು ಸಾಂಪ್ರದಾಯಿಕವಾಗಿ ನಡೆದರೆ, ಸೋಮವಾರ ರಥಬೀದಿಯಲ್ಲಿ ಲಕ್ಷಾಂತರ ಮಂದಿ ಉತ್ಸಾಹ ಮುಗಿಲುಮುಟ್ಟಿದಂತೆ ವೈಭವದಿಂದ ಶ್ರೀ ಕೃಷ್ಣ ಲೀಲೋತ್ಸವವು ನಡೆಯಿತು.

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಎರಡು ದಿನಗಳ ಶ್ರೀ ಕೃಷ್ಣ ಜನ್ಮಾಷ್ಟಮಿ ಸೋಮವಾರ ವೈಭವದಿಂದ ಸಂಪನ್ನಗೊಂಡಿತು. ಭಾನುವಾರ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಭಕ್ತಿ ಪರಾಕಾಷ್ಟೆಯಿಂದ ಕೃಷ್ಣನ ಹುಟ್ಟಹಬ್ಬವು ಸಾಂಪ್ರದಾಯಿಕವಾಗಿ ನಡೆದರೆ, ಸೋಮವಾರ ರಥಬೀದಿಯಲ್ಲಿ ಲಕ್ಷಾಂತರ ಮಂದಿ ಉತ್ಸಾಹ ಮುಗಿಲುಮುಟ್ಟಿದಂತೆ ವೈಭವದಿಂದ ಶ್ರೀ ಕೃಷ್ಣ ಲೀಲೋತ್ಸವವು ನಡೆಯಿತು.ಮಧ್ಯಾಹ್ನ 3.20ಕ್ಕೆ ಸರಿಯಾಗಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವಾದ್ಯಮೇಳದೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿ ಕೃಷ್ಣನ ಮಣ್ಣಿನ ಪ್ರತಿಬಿಂಬವನ್ನು ಮೆರವಣಿಗೆಯಲ್ಲಿ ತಂದು, ಹಿರಿಯರಾದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಅದಮಾರು ಮಠದ ಹಿರಿಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಚಿನ್ನದ ರಥಾರೋಹಣ ಮಾಡಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ನಂತರ ಶ್ರೀಪಾದತ್ರಯರು ಚಿನ್ನದ ರಥೋತ್ಸವಕ್ಕೆ ಚಾಲನೆ ನೀಡಿದರು. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಉತ್ಸವಮೂರ್ತಿಗಳನ್ನು ಹೊತ್ತ ನವರತ್ನ ರಥ ಮುಂದೆ ಸಾಗಿದರೆ, ಭಕ್ತರು ಗೋವಿಂದ ಗೋವಿಂದ ಎಂದು ಭಕ್ತುತ್ಯಾಹದಿಂದ ಚಿನ್ನದ ರಥ ಎಳೆದರು.

ಮಹಿಳೆಯರ ಚಂಡೆ, ಪಂಚವಾದ್ಯಗಳು, ಸ್ಯಾಕ್ಸೋಫೋನ್, ಕೊಂಬುಕಹಳೆ, ತಾಸೆಮೇಳಗಳು, ಭಜನಾ ತಂಡಗಳು ರಥಬೀದಿಯಲ್ಲಿ ದೈವಿಕ ವಾತಾವರಣವನ್ನು ಸೃಷ್ಟಿಸಿದ್ದವು. ಹುಲಿವೇಷಧಾರಿಗಳಂತೂ ರಥಬೀದಿಯ ಉದ್ದಗಲ ಸಾಲದೆನ್ನುವಂತೆ ಕುಣಿದು ಕುಪ್ಪಳಿಸಿದರುಕೃಷ್ಣಮಠದ ಎದುರು ಮತ್ತು 12 ಕಡೆಗಳಲ್ಲಿ ಎತ್ತರದ ಗುರ್ಜಿಗಳನ್ನು ನಿರ್ಮಿಸಿ, ಅದರಲ್ಲಿ ಓಕುಳಿ, ಕಜ್ಜಾಯ, ಹಾಲು, ಮೊಸರು ಇತ್ಯಾದಿಗಳಿದ್ದ ಮಡಕೆಗಳನ್ನು ಕಟ್ಟಲಾಗಿತ್ತು, ಗೊಲ್ಲರ ವೇಷಧಾರಿ ಹಾರಿ ಅವುಗಳನ್ನು ಒಡೆದು ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸಿ ನೆರೆದವರಿಗೆ ಭರ್ಜರಿ ಮನರಂಜನೆ ನೀಡಿದರು.ಈ ನಡುವೆ ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಶ್ರೀತ್ರಯರು ಹುಲಿವೇಷ ಕುಣಿತದ ಸ್ಪರ್ಧೆಗೆ ಚಾಲನೆ ನೀಡಿದರು ಮತ್ತು ನವಜಾತ ಕೃಷ್ಣನಿಗೆ ನೈವೇದ್ಯವಾಗಿ ಸಮರ್ಪಿಸಲಾದ ಲಡ್ಡು, ಚಕ್ಕುಲಿಗಳನ್ನು ಭಕ್ತರಿಗೆ ವಿತರಿಸಿದರು, ಅದನ್ನು ಪಡೆಯಲು ಭಕ್ತರು ಮೇಲಾಟವನ್ನೇ ನಡೆಸಿದರು.ರಥೋತ್ಸವದ ನಂತರ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಪುತ್ತಿಗೆ ಶ್ರೀಗಳು ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆಸಿ, ವಿಗ್ರಹವನ್ನು ಸರೋವರದಲ್ಲಿ ವಿಸರ್ಜನೆ ಮಾಡಿದರು. ಅದನ್ನೇ ಕಾಯುತಿದ್ದ ಹತ್ತಾರು ಯುವಕರು ನೀರಿಗೆ ಧುಮಕಿ ಅದನ್ನು ಹೆಕ್ಕಿ ತರಲು ಸ್ಪರ್ಧೆ ನಡೆಸಿದರು, ಕೊನೆಗೆ ಒಬ್ಬ ಯುವಕನ ಅದನ್ನು ನೀರಿನಾಳದಿಂದ ಹೆಕ್ಕಿತಂದು ವಿಶ್ವಕಪ್‌ನಂತೆ ಎತ್ತಿ ಹಿಡಿದು ಪ್ರದರ್ಶಿಸಿ ಬೀಗಿದ.ಇದರ ನಂತರ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಹುಲಿವೇಷ ಕುಣಿತ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಗೆದ್ದವರಿಗೆ ಪರ್ಯಾಯ ಶ್ರೀಗಳು ಲಕ್ಷಾಂತರ ರು.ಗಳ ಬಹುಮಾನಗಳನ್ನು ವಿತರಿಸಿದರು.