ತ್ರಿಕನ್ನಾಡ್ ತ್ರಯಂಭಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮುಂದೆ ಶ್ರೀಗಳು ಇಲ್ಲಿನ ಮಾಧ್ವರಿಗೆ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲೊಂದಾದ ಕಾಪು ಮಠಕ್ಕೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ ಮುಂದಿನ ವರ್ಷ ಕೃಷ್ಣಮಠದಲ್ಲಿ ಪರ್ಯಾಯ ಸರ್ವಜ್ಞ ಪೀಠವನ್ನೇರಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಪರ್ಯಾಯ ಪೂರ್ವಭಾವಿ ಪುಣ್ಯಕ್ಷೇತ್ರ ದರ್ಶನ ನಿರತರಾಗಿದ್ದು, ಕಾಸರಗೋಡಿನ ಎಡನೀರು ಮಠಕ್ಕೆ ಭೇಟಿ ನೀಡಿದರು. ಅವರನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಇಲ್ಲಿನ ಎಡನೀರು ಮಠದ ಆಡಳಿತಕ್ಕೆ ಒಳಪಟ್ಟಿರುವ ವಿಷ್ಣುಮಂಗಲ ದೇವಸ್ಥಾನಕ್ಕೆ ಎಡನೀರು ಶ್ರೀಗಳ ಆಹ್ವಾನದ ಮೇರೆಗೆ ಭೇಟಿ ನೀಡಿದರು. ಅವರನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಬರ ಮಾಡಿಕೊಂಡು, ಮಾಲಿಕೆ ಮಂಗಳಾರತಿ ಮಾಡಿದರು ಮತ್ತು ಶೀರೂರು ಶ್ರೀಗಳು ಎಡನೀರು ಶ್ರೀಗಳನ್ನು ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು.

ಎಡನೀರು ಮಠದಲ್ಲಿ ತಮ್ಮ ಪಟ್ಟದ ದೇವರಿಗೆ ಸಂಸ್ಥಾನ ಪೂಜೆ ನರೆವೇರಿಸಿದ ಶಿರೂರು ಶ್ರೀಗಳು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿ ನಡೆಯುತ್ತಿರುವ ಕೋಟಿ ಪಂಚಾಕ್ಷರಿ ಜಪಯಜ್ಞ ಮತ್ತು ಶ್ರೀ ಚಕ್ರ ಪೂಜೆ ಹಾಗೂ ರುದ್ರ ಹೋಮ ಈ ಕಾರ್ಯಕ್ರಮಗಳ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರು. ಬಳಿಕ ತ್ರಿಕನ್ನಾಡ್ ತ್ರಯಂಭಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮುಂದೆ ಶ್ರೀಗಳು ಇಲ್ಲಿನ ಮಾಧ್ವರಿಗೆ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲೊಂದಾದ ಕಾಪು ಮಠಕ್ಕೆ ಭೇಟಿ ನೀಡಿದರು. ಅಲ್ಲಿ ಇಂದಿಗೂ ಮಧ್ವಾಚಾರ್ಯರು ನೀಡಿರುವ ಶ್ರೀಕರ ಲಕ್ಷ್ಮೀನಾರಾಯಣ ದೇವರ ವಿಗ್ರಹ, ಮುದ್ರೆ, ಪ್ರಾಣದೇವರ ವಿಗ್ರಹ, ಪಾದುಕೆಗಳಿಗೆ ನಿತ್ಯ ಪೂಜೆ ನಡೆಯುತ್ತಿದೆ. ಶ್ರೀಗಳು ಅಲ್ಲಿಂದ ಬೆಲ್ಲೂರು ಮಹಾವಿಷ್ಣು ದೇವಸ್ಥಾನ ಮತ್ತು ಕೊಂಡೆವೂರು ಮಠಕ್ಕೆ ಭೇಟಿ ನೀಡಿ ಸಂಸ್ಥಾನ ಪೂಜೆ ನೆರವೇರಿಸಿದರು.