ಶಾಲಾ ವಾರ್ಷಿಕೋತ್ಸವದಲ್ಲಿ ಮೇಳೈಸಿದ ದೇಶದ ವೈವಿಧ್ಯಮಯ ಸಂಸ್ಕೃತಿ

| Published : Dec 26 2024, 01:00 AM IST

ಸಾರಾಂಶ

ವಿದ್ಯಾರ್ಥಿಗಳು ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿತು.

ಸಂಡೂರು: ಪಟ್ಟಣದ ಹೊರವಲಯದಲ್ಲಿರುವ ಬಿಕೆಜಿ ಸಮೂಹ ಸಂಸ್ಥೆಯ ಬಿಕೆಜಿ ಗ್ಲೋಬಲ್ ಶಾಲೆ ಹಾಗೂ ಪಿಯು ಕಾಲೇಜಿನ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ಶಾಲಾ-ಕಾಲೇಜು ವಾರ್ಷಿಕೋತ್ಸವ ಬಿಕೆಜಿ ಕಲಾ ತರಂಗ್ ಕಾರ್ಯಕ್ರಮದಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ ಅನಾವರಣಗೊಂಡಿತು.

ಬಿಕೆಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕಿ ಕಮಲಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ವಾರ್ಷಿಕೋತ್ಸವದ ಶೀರ್ಷಿಕೆಗೆ ತಕ್ಕಂತೆ ಆಯೋಜಿಸಲಾಗಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿಯನ್ನು ಪ್ರಸ್ತುತಪಡಿಸಿದ್ದಲ್ಲದೆ, ವಿದ್ಯಾರ್ಥಿಗಳು ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿತು.

ಕಾರ್ಯಕ್ರಮದಲ್ಲಿ ಯಕ್ಷಗಾನ, ಶಿವತಾಂಡವ ನೃತ್ಯ, ಜನಪದ ನೃತ್ಯ, ದೀಪಾವಳಿ, ರಂಜಾನ್, ದುರ್ಗಾಪೂಜೆ, ಪುರಿ ಜಗನ್ನಾಥ ರಥೋತ್ಸವ, ಗಣೇಶ ಚತುರ್ಥಿ, ಕ್ರಿಸ್‌ಮಸ್, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಹನುಮಾನ್ ಚಾಲಿಸಾ ನೃತ್ಯ ರೂಪಕ, ಏಕಲವ್ಯ, ಭಕ್ತ ಕುಂಬಾರ, ಕಲಿಯುಗ ನೃತ್ಯ ಮತ್ತು ನಾಟಕ, ಏಕತೆ ಮತ್ತು ವೈವಿಧ್ಯತೆಯ ನೃತ್ಯ ರೂಪಕಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದವು.

ವಿದ್ಯಾರ್ಥಿಗಳೇ ಪ್ರಸ್ತುತ ಪಡಿಸಿದ ವಿವಿಧ ವಾದ್ಯಗಳನ್ನೊಳಗೊಂಡ ಆರ್ಕೆಸ್ಟ್ರಾ, ಯೋಗ, ಮೈಮ್, ಕರಾಟೆ ಕಲೆಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಕೆ.ವಿ. ಮೋಹನ್ ರಾವ್ ಬಿಕೆಜಿ ಶಾಲೆ ಹಾಗೂ ಕಾಲೇಜಿನ ಪ್ರಗತಿಯ ವರದಿಯನ್ನು ವಾಚಿಸಿದರು. ಬಿಕೆಜಿ ಸಮೂಹ ಸಂಸ್ಥೆಗಳ ಟ್ರಸ್ಟಿಗಳಾದ ವೀಣಾ ಪಾಟೀಲ್, ಬಿ.ನಾಗನಗೌಡ, ಬಿ.ಕೆ. ಬಸವರಾಜ ಹಾಗೂ ಅವರ ಕುಟುಂಬ ವರ್ಗದವರು, ವೀರೇಶ್ ಮತ್ತು ಅವರ ಕುಟುಂಬ ವರ್ಗದವರು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.