ಆನೆ ಕಾರಿಡಾರ್ ಕಾರ್ಯರೂಪಕ್ಕೆ ಬಾರದಿದ್ರೆ ಉಪವಾಸ ಸತ್ಯಾಗ್ರಹ

| Published : Dec 26 2024, 01:00 AM IST

ಸಾರಾಂಶ

ಆನೆ ಕಾರಿಡರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದು, ಶೀಘ್ರವಾಗಿ ಕಾರ್ಯರೂಪಕ್ಕೆ ಬಾರದಿದ್ದರೇ ಫೆಬ್ರವರಿ ತಿಂಗಳ ಕೊನೆಯಲ್ಲಿ ವಿಧಾನಸೌಧದ ಮುಂದೆ ಅಹೋರಾತ್ರಿ ಉಪವಾಸ ಸತ್ಯಗ್ರಹ ಮಾಡುವುದಾಗಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಸಂಗಂ ಎಚ್ಚರಿಸಿದರು. ಸರ್ಕಾರ ಮತ್ತು ಸಚಿವರ ಘೋಷಣೆ ಘೋಷಣೆಯಾಗಿ ಉಳಿಯದೆ ಶೀಘ್ರವಾಗಿ ಬಜೆಟ್ ಸಂದರ್ಭದಲ್ಲೆ ಕಾರಿಡಾರ್ ಯೋಜನೆ ಕಾಮಗಾರಿ ಕಾರ್ಯರೂಪಕ್ಕೆ ಬಂದರೆ ಮಲೆನಾಡು ಬಾಗದ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಹಾಸನ

ಆನೆ ಕಾರಿಡರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದು, ಶೀಘ್ರವಾಗಿ ಕಾರ್ಯರೂಪಕ್ಕೆ ಬಾರದಿದ್ದರೇ ಫೆಬ್ರವರಿ ತಿಂಗಳ ಕೊನೆಯಲ್ಲಿ ವಿಧಾನಸೌಧದ ಮುಂದೆ ಅಹೋರಾತ್ರಿ ಉಪವಾಸ ಸತ್ಯಗ್ರಹ ಮಾಡುವುದಾಗಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಸಂಗಂ ಎಚ್ಚರಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯಲ್ಲಿನ ಕಾಡಾನೆಗಳ ಹಾವಳಿ ತಪ್ಪಿಸಲು, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ಬೈಕ್, ಆಟೋ ರ್ಯಾಲಿ ಹಾಗೂ ಹಾಸನದ ಹೇಮಾವತಿ ಪ್ರತಿಮೆ ಆವರಣ ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭ ಬೆಂಬಲ ನೀಡಿ ಸಹಕರಿಸಿ ಯಶಸ್ವಿಗೊಳಿಸಿದ ಜಿಲ್ಲೆಯ ಶಾಸಕರಿಗೆ, ಮಾಧ್ಯಮ ಮಿತ್ರರಿಗೆ, ಜಿಲ್ಲೆಯ ವಿವಿಧ ಪ್ರಗತಿಪರ ಸಂಘನೆಗಳು, ಕಾಫಿ ಬೆಳೆಗಾರರ, ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮತ್ತು ನಮ್ಮ ಸಂಘಟನೆ ಪದಾಧಿಕಾರಿಗಳು, ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಕಾರ್ಯಕರ್ತರಿಗೆ ಜಯ ಕರ್ನಾಟಕ ಸಂಘಟನೆ ನಮ್ಮ ಸಂಘಟನೆಯ ಧರಣಿ ಸತ್ಯಾಗ್ರಹ ಉಲ್ಲೇಖಿಸಿ ಜಿಲ್ಲೆಯ ಶಾಸಕರು ಸದನದಲ್ಲಿ ಚರ್ಚಿಸಿ ಬೆಂಬಲಿಸಿದರೆ, ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿಯವರು ಧರಣಿ ಸತ್ಯಾಗ್ರಹದಲ್ಲಿ ನಮ್ಮೊಂದಿಗೆ ಭಾಗವಹಿಸಿ ಬೆಂಬಲಿಸಿದ್ದಾರೆ. ಈ ಸಂದರ್ಭ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ನಮ್ಮ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಬೆಳಗಾಂ ವಿಧಾನಸಭಾ ಅಧಿವೇಶನದಲ್ಲಿ ಹಾಸನ ಜಿಲ್ಲೆಯ ಕಾಡಾನೆಗಳ ಉಪಟಳದಿಂದ ಹಾಗುತ್ತಿರುವ ಬೆಳೆ ನಷ್ಟ, ಕಾಡಾನೆ- ಮಾನವ ಸಂಘರ್ಷದಿಂದ ಆಗುತ್ತಿರುವ ಸಾವು, ನೋವುಗಳ ಬಗ್ಗೆ ಚರ್ಚಿಸಿದ ಸಂದರ್ಭ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು ಕೊಡಗು ಮತ್ತು ಹಾಸನ ಜಿಲ್ಲೆಯ 2 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ರು.ಗಳನ್ನು ಮೀಸಲಿಡುವುದಾಗಿ ಘೋಷಿಸಿದ್ದಾರೆ. ಆದರೆ ಸರ್ಕಾರ ಮತ್ತು ಸಚಿವರ ಘೋಷಣೆ ಘೋಷಣೆಯಾಗಿ ಉಳಿಯದೆ ಶೀಘ್ರವಾಗಿ ಬಜೆಟ್ ಸಂದರ್ಭದಲ್ಲೆ ಕಾರಿಡಾರ್ ಯೋಜನೆ ಕಾಮಗಾರಿ ಕಾರ್ಯರೂಪಕ್ಕೆ ಬಂದರೆ ಮಲೆನಾಡು ಬಾಗದ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ.

ಇತ್ತೀಚಿನ ದಿನಗಳಲ್ಲಂತೂ ಬೇಲೂರು ತಾಲೂಕಿನಲ್ಲಂತೂ ಕಾಡಾನೆಗಳ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಾರ್ಮಿಕರು, ರೈತರು, ಬೆಳೆಗಾರರು ದಾಳಿಗೆ ಸಿಲುಕಿ ನರಳುವಂತಾಗಿದೆ. ಆದ್ದರಿಂದ ತಕ್ಷಣವೇ ಸರ್ಕಾರ, ಸಚಿವರು ಸದನದಲ್ಲಿ ಘೋಷಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ, ಕಾಫಿ ಬೆಳೆಗಾರರ, ರೈತ, ದಲಿತ, ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ವಿಧಾನಸೌಧ ಮುತ್ತಿಗೆ ಹಾಗೂ ಪ್ರತಿಭಟನಾ ಧರಣಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು, ದಸಂಸ ಮುಖಂಡ ಮಲ್ಲೇಶಗ ಅಂಬುಗ, ಇತರರು ಇದ್ದರು.

====ಫೋಟೋ: ಹಾಸನ ಮಾಧ್ಯಮಗೋಷ್ಠಿಯಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಸಂಗಂ ಮಾತನಾಡಿದರು.