ಉಡುಪಿ-ಉಚ್ಚಿಲ ದಸರಾ ಕುಸ್ತಿ ಸ್ಪರ್ಧೆ: ಶಿವಾಜಿ ಫಿಸಿಕಲ್‌ಗೆ ಸಮಗ್ರ ಪ್ರಶಸ್ತಿ

| Published : Sep 29 2025, 03:02 AM IST

ಉಡುಪಿ-ಉಚ್ಚಿಲ ದಸರಾ ಕುಸ್ತಿ ಸ್ಪರ್ಧೆ: ಶಿವಾಜಿ ಫಿಸಿಕಲ್‌ಗೆ ಸಮಗ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ರಲ್ಲಿ ಶನಿವಾರ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಭಾಗದಲ್ಲಿ ವಿರಳವಾಗಿರುವ ಈ ಪಂದ್ಯಾಟ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿತು.

ಕನ್ನಡಪ್ರಭ ವಾರ್ತೆ ಉಚ್ಚಿಲ

ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ರಲ್ಲಿ ಶನಿವಾರ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಭಾಗದಲ್ಲಿ ವಿರಳವಾಗಿರುವ ಈ ಪಂದ್ಯಾಟ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿತು.ಮಹಿಳಾ ವಿಭಾಗದ ಉಚ್ಚಿಲ ದಸರಾ ಕುವರಿ ಪ್ರಶಸ್ತಿ - 2025 ಮತ್ತು ಬೆಳ್ಳಿ ಗದೆಯನ್ನು ಮಂಗಳೂರು ಬೋಳಾರಿನ ಶಿವಾಜಿ ಫಿಸಿಕಲ್ ಸಂಘದ ಶೌರ್ಯ ಗೆದ್ದುಕೊಂಡರು. ಇದೇ ಸಂಘದ ಕುಸ್ತಿಪಟುಗಳು ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರು.

ಪುರುಷರ ವಿಭಾಗದಲ್ಲಿ ಉಚ್ಚಿಲ ದಸರಾ ಕುಮಾರ್ ಪ್ರಶಸ್ತಿ- 2025 ಮತ್ತು ಬೆಳ್ಳಿ ಗದೆಯನ್ನು ಮಂಗಳೂರು ಕೊಡಿಕಲ್‌ ಮುಖ್ಯಪ್ರಾಣ ಸಂಘದ ಪ್ರಕಾಶ್ ರಾಥೋಡ್ ಮತ್ತು ಉಚ್ಚಿಲ ಕೇಸರಿ ಪ್ರಶಸ್ತಿ ಮತ್ತು ಬೆಳ್ಳಿಗದೆಯನ್ನು ಶಿವಾಜಿ ಫಿಸಿಕಲ್‌ನ ಮನೋಜ್ ಅವರು ಗೆದ್ದುಕೊಂಡರು. ಪುರುಷರ ವಿಭಾಗದಲ್ಲಿಯೂ ಶಿವಾಜಿ ಫಿಸಿಕಲ್ ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಕುಸ್ತಿ ಸ್ಪರ್ಧೆಯ ಪ್ರಶಸ್ತಿಗಳನ್ನು ಉಚ್ಚಿಲ- ಉಡುಪಿ ದಸರಾದ ರೂವಾರಿ ನಾಡೋಜ ಜಿ.ಶಂಕರ್ ವಿತರಿಸಿ, ವಿಜೇತರನ್ನು ಅಭಿನಂದಿಸಿದರು.ಸಂಭ್ರಮ ಹೆಚ್ಚಿಸಿದ ದಾಂಡಿಯಾ:

ಶನಿವಾರ ಸಂಜೆ ಕ್ಷೇತ್ರದ ರಥಬೀದಿಯಲ್ಲಿ ‘ಸಾಮೂಹಿಕ ದಾಂಡಿಯಾ ನೃತ್ಯ’ವನ್ನು ಆಯೋಜಿಸಲಾಗಿತ್ತು. ಇದರಲ್ಲಿ ನೂರಾರು ಮಹಿಳೆಯರು, ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಗಳ ಸುತ್ತಮುತ್ತ ಜಮಾಯಿಸಿದ್ದು, ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿತು.ನಾಡೋಜ ಜಿ. ಶಂಕರ್ ಅವರ ಅವರ ಪತ್ನಿ ಮತ್ತು ಮಗಳು ಕೂಡ ದಾಂಡಿಯಾ ನೃತ್ಯ ಮಾಡಿ ವಿಶೇಷ ಗಮನ ಸೆಳೆದರು. ಈ ನೃತ್ಯದಲ್ಲಿ ಕೆಲವು ವಿದೇಶಿ ಪ್ರವಾಸಿಗರು ಭಾಗವಹಿಸಿದ್ದು, ಅದರ ಆಕರ್ಷಣೆಗೆ ಸಾಕ್ಷಿಯಾಯಿತು.ಈ ಕಾರ್ಯಕ್ರಮಗಳ‍ಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೊಟ್ಯಾನ್, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ ಮತ್ತು ದಿನೇಶ್‌ ಎರ್ಮಾಳು, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್‌, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

ದೇಹದಾರ್ಢ್ಯ: ಬೆಳಗಾವಿ ಕಿರಣ್ ಚಾಂಪಿಯನ್

ಶನಿವಾರ ಇಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, 6 ವಿಭಾಗಗಳಲ್ಲಿ ನಡೆದ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಈ ಸ್ಪರ್ಧೆಯಲ್ಲಿ ಬೆಳಗಾವಿಯ ವಿ.ಬಿ.ಕಿರಣ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಉಡುಪಿಯ ಸೂರಜ್ ಸಿಂಗ್‌ಗೆ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಚಿರಾಗ್ ಪೂಜಾರಿಗೆ ಬೆಸ್ಟ್ ಪೋಸರ್ ಪ್ರಶಸ್ತಿಗೆ ಭಾಜನರಾದರು.