ಸಾರಾಂಶ
ಯಲ್ಲಾಪುರ: ಯುಗಾದಿ ಉತ್ಸವ ಸಮಿತಿ ನೇತೃತ್ವದಲ್ಲಿ ಭಾನುವಾರ ಪಟ್ಟಣದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದಿಂದ ೪ ಗಂಟೆಗೆ ಭವ್ಯ ಶೋಭಾಯಾತ್ರೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿ, ಉತ್ಸವಕ್ಕೆ ಮೆರುಗು ತಂದರು. ಇದರಲ್ಲಿ ವಿಶೇಷ ಆಕರ್ಷಣೆಗಳಾಗಿ ಕುಂದಾಪುರದ ಶ್ರೀರಾಮ ಮಕ್ಕಳ ಭಜನಾ ತಂಡ, ಕುಂದಾಪುರ ಗಂಗೆಬೈಲಿನ ಶ್ರೀರಾಮ ಮಕ್ಕಳ ಕುಣಿತದ ಕಲಾ ತಂಡಗಳು ಸುಮಾರು ೪ ಗಂಟೆಗಳ ಕಾಲ ನಿರಂತರ ಸಂಗೀತ ವಾದ್ಯದ ಜತೆ ನೃತ್ಯ ಮಾಡಿದರು. ಭಾರತಮಾತೆ, ಬಾಲರಾಮ, ಶಿವಾಜಿ, ಅಘೋರಿ ವೇಷ, ಯಕ್ಷಗಾನ ವೇಷ, ತಿರುಪತಿ ತಿಮ್ಮಪ್ಪ ಹೀಗೆ ಹತ್ತಾರು ಟ್ಯಾಬ್ಲೂ ಪ್ರದರ್ಶನ ಸುಂದರವಾಗಿ ಕಂಡುಬಂತು.ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕ ವಿ.ಎಸ್. ಪಾಟೀಲ, ಪ್ರಮುಖರಾದ ವಿವೇಕ ಹೆಬ್ಬಾರ, ಹರಿಪ್ರಕಾಶ ಕೋಣೆಮನೆ, ರಾಷ್ಟ್ರೀಯ ಸ್ವಯಸೇವಕ ಸಂಘದ ಪ್ರಮುಖರು ಭಾಗಿಯಾಗಿದ್ದರು. ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಸಂಚಾಲಕ ಪ್ರದೀಪ ಯಲ್ಲಾಪುರಕರ, ಎಲ್ಲ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಶೋಭಾಯಾತ್ರೆ ನಿರ್ವಹಿಸಿದರು.
ಪಂಚಾಂಗ ಶ್ರವಣ: ಹಿಂದೂ ಧರ್ಮದಲ್ಲಿ ನಾವು ಆಚರಿಸುವ ಹಬ್ಬಗಳಲ್ಲಿ ಪ್ರತಿಯೊಂದೂ ಭಿನ್ನವಾಗಿದೆ. ಆದರೆ ಯುಗಾದಿ ಹಬ್ಬ ಇನ್ನೂ ಮಹತ್ವದ್ದು. ಪ್ರಕೃತಿಯ ಗಿಡ-ಮರಗಳು ಹಳೆ ಎಲೆಗಳು ಉದುರಿ, ಹೊಸ ಎಲೆ ಚಿಗುರಿ, ಹಸಿರಾಗುತ್ತದೆ. ಹೊಸ ಚೈತನ್ಯ ಮೂಡಿದಂತೆ. ಈ ರೀತಿ ಹಬ್ಬಗಳ ಆಚರಣೆ ಯಾವ ಸಮಾಜದಲ್ಲೂ ಇಲ್ಲ ಎಂದು ವಿ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.ಯುಗಾದಿ ಉತ್ಸವದ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆಯ ನಂತರ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಂಚಾಂಗ ಶ್ರವಣ ಮಾಡಿ, ವರ್ಷ ಭವಿಷ್ಯದ ವಿವರಣೆ ನೀಡಿದರು. ಈ ವರ್ಷ ೨೫ನೇ ವರ್ಷದ ಯುಗಾದಿ ಉತ್ಸವ. ಹಿಂದುತ್ವದ ವರ್ಷಾರಂಭ. ಇದು ಚಾಂದ್ರಮಾನ ಯುಗಾದಿ. ೧೫ ದಿನಗಳ ನಂತರ ಸೌರಮಾನ ಯುಗಾದಿ ಬರಲಿದೆ. ವಿಶ್ವಾವಸು ಸಂವತ್ಸರದಲ್ಲಿ ರೋಗ, ಕಳ್ಳರ ಭಯ ಹೆಚ್ಚಿದೆ. ಅಡಕೆ, ಬಂಗಾರ, ಬೆಳ್ಳಿ, ತಾಮ್ರ, ಬೆಲ್ಲ, ತುಪ್ಪ, ಜೇನು ಸೇರಿದಂತೆ ಹಲವು ವಸ್ತುಗಳ ಬೆಲೆ ಏರುತ್ತದೆ. ಗೋವುಗಳಿಗೆ ರೋಗಬಾಧೆ, ಹಾಗೆಯೇ ವಧೆಗಳೂ ಹೆಚ್ಚುತ್ತವೆ. ಹಾಗಂತ ಮಳೆಯ ಪ್ರಮಾಣ ಅತಿಹೆಚ್ಚು ಕೂಡ ಆಗಲಾರದು. ಈ ವರ್ಷ ರವಿ ಅಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಗ್ನಿಬಾಧೆ, ಬರಗಾಲ, ದೇಶ-ವಿದೇಶಗಳಲ್ಲಿ ಯುದ್ಧಭೀತಿ, ಪ್ರಜೆಗಳಿಗೆ ಸಂಕಷ್ಟ, ನೀರಿನ ಸಮಸ್ಯೆ ಉಂಟಾಗುತ್ತದೆ. ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಆಗಲಿದೆ ಎಂದು ವಿವರಿಸಿದರು.ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೫ ವರ್ಷಗಳಿಂದ ಯುಗಾದಿ ಉತ್ಸವ ಆಚರಿಸಿಕೊಂಡು ಬಂದಿದ್ದೇವೆ. ಇದು ನಮ್ಮ ಸಂಸ್ಕೃತಿಯನ್ನು ಉಳಿಸುವ ಮಹತ್ವದ ಕಾರ್ಯ. ತಾಲೂಕಿನ ಎಲ್ಲ ಸ್ನೇಹಿತರ ಸಹಕಾರದಿಂದಾಗಿ ಉತ್ಸವ ಯಶಸ್ವಿಯಾಗಿ ನಡೆದಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಮಹೇಶ ದೇಸಾಯಿ ಸಾಂದರ್ಭಿಕ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಆಚಾರಿ ಉಪಸ್ಥಿತರಿದ್ದರು. ಭಾರತೀಯ ಹಿಂದೂ ಪದ್ಧತಿಯ ''''''''ಭಾರತೀ'''''''' ದಿನದರ್ಶಿಕೆ ಲೋಕಾರ್ಪಣೆಗೊಳಿಸಲಾಯಿತು.ಉತ್ಸವ ಸಮಿತಿ ಸಂಚಾಲಕ ಪ್ರದೀಪ ಯಲ್ಲಾಪುರಕರ ಸ್ವಾಗತಿಸಿದರು. ಕೌಸ್ತುಭ ಭಟ್ಟ ಕಾರೆಮನೆ ದೇಶಭಕ್ತಿಗೀತೆ ಹಾಡಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು. ಕಾರ್ಯದರ್ಶಿ ಮಂಜುನಾಥ ಹಿರೇಮಠ ವಂದಿಸಿದರು.