ಕರ್ನಾಟಕದ ಗದಗ ಎರಡು ಗ್ರಾಮಗಳ ಜಲಸಂರಕ್ಷಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

| N/A | Published : Apr 01 2025, 12:46 AM IST / Updated: Apr 01 2025, 08:03 AM IST

Prime Minister Narendra Modi (File photo/ANI)
ಕರ್ನಾಟಕದ ಗದಗ ಎರಡು ಗ್ರಾಮಗಳ ಜಲಸಂರಕ್ಷಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕದ ಗದಗ ಜಿಲ್ಲೆಯ ಎರಡು ಗ್ರಾಮಗಳ ಜನತೆ, ಜಲಸಂರಕ್ಷಣೆಗೆ ಕೈಗೊಂಡ ಶ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕದ ಗದಗ ಜಿಲ್ಲೆಯ ಎರಡು ಗ್ರಾಮಗಳ ಜನತೆ, ಜಲಸಂರಕ್ಷಣೆಗೆ ಕೈಗೊಂಡ ಶ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಗ್ರಾಮಗಳ ಶ್ರಮ ದೇಶದ ಇತರ ಗ್ರಾಮಗಳಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಭಾನುವಾರ ಪ್ರಸಾರವಾದ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಗದಗ ತಾಲೂಕಿನ ಮದಗಾನೂರ, ಬೆಳಹೋಡ ಗ್ರಾಮದ ಜನರ ಕೆರೆ ಸಂರಕ್ಷಣೆಯನ್ನು ಉದಾಹರಿಸುವ ಮೂಲಕ ಜಲಮೂಲಗಳ ರಕ್ಷಣೆ ಕುರಿತು ದೇಶದ ಜನರಿಗೆ ಸಂದೇಶ ನೀಡಿದ್ದಾರೆ.

ಮೋದಿ ಹೇಳಿದ್ದೇನು?:

‘ಕಳೆದ ಕೆಲವು ವರ್ಷಗಳಿಂದ ಗದಗ ಜಿಲ್ಲೆಯ 2 ಹಳ್ಳಿಗಳ ಕೆರೆಗಳು ಬತ್ತಿಹೋಗಿದ್ದವು. ಪ್ರಾಣಿಗಳಿಗೆ ಕುಡಿಯಲು ಸಹ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ನಿಧಾನವಾಗಿ ಕೆರೆಗಳಲ್ಲಿ ಹುಲ್ಲು ಬೆಳೆದು, ಹೂಳು ತುಂಬಿಕೊಂಡಿತು. ಆದರೆ ಗ್ರಾಮಸ್ಥರು ಕೆರೆಗಳನ್ನು ಸ್ವಚ್ಛಗೊಳಿಸುವ ನಿರ್ಧಾರ ಕೈಗೊಂಡರು. ಇವರೊಂದಿಗೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಿದವು. ಪರಿಣಾಮವಾಗಿ ಇಂದು ಅಲ್ಲಿನ ಕೆರೆಗಳು ಸ್ಚಚ್ಛವಾಗಿವೆ. ಜನ ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ನೀರಿನ ಸದುಪಯೋಗಕ್ಕೆ ಇದು ಅತ್ಯುತ್ತಮ ಉದಾಹರಣೆ’ ಎಂದಿದ್ದಾರೆ.

ಗ್ರಾಮಸ್ಥರ ಸಾಧನೆ?:

ಗದಗ ತಾಲೂಕಿನ ಮದಗಾನೂರ ಮತ್ತು ಬೆಳಹೋಡ ಗ್ರಾಮಗಳ ಪುರಾತನ ಕೆರೆಗಳು ಬತ್ತಿ ಹೋಗಿ, ಹೂಳು ತುಂಬಿಕೊಂಡಿತ್ತು. ಜನ ನೀರಿಗಾಗಿ ಪರದಾಡುವಂತಾಗಿತ್ತು. ಇದರಿಂದಾಗಿ ಗ್ರಾಮಸ್ಥರು ಕೆರೆ ಸ್ವಚ್ಛಗೊಳಿಸಲು ಮುಂದಾದರು. ಆದರೆ ಕೆರೆಗಳ ಪುನರುಜ್ಜೀವನ ಸಾಧ್ಯವೇ ಇಲ್ಲವೆಂದು ಸ್ಥಳೀಯ ಆಡಳಿತ ನಿರಾಕರಿಸಿತು. 

ಆಗ, ಕಳೆದ ವರ್ಷವಷ್ಟೇ ಬೇರೊಂದು ಕೆರೆ ಸ್ವಚ್ಛಗೊಳಿಸಿದ್ದ ‘ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿ’ ಸಂಘಟನೆಯನ್ನು ಸಂಪರ್ಕಿಸಿದರು. ಸೊಸೈಟಿ ಗ್ರಾಮಸ್ಥರೊಂದಿಗೆ ಕೈಜೋಡಿಸಿತು. ಮಣ್ಣು ತೆಗೆಯುವ ಯಂತ್ರ ಹಾಗೂ ಕ್ರೇನ್‌ಗಳನ್ನು ಒದಗಿಸಿತು. ದಾನಿಗಳಿಂದ ನಿಧಿ ಸಂಗ್ರಹಿಸಿದ ಗ್ರಾಮಸ್ಥರು, ತಾವೇ ಟ್ರಾಕ್ಟರ್‌ಗಳನ್ನು ಒದಗಿಸಿದರು. ಜನರೆಲ್ಲ ಸ್ವತಃ ಬಂದು ನಿಂತು ಕೆಲಸದಲ್ಲಿ ತೊಡಗಿಕೊಂಡರು. ಪರಿಣಾಮವಾಗಿ ಬೆಳಹೋಡ ಗ್ರಾಮದ ಕೆರೆ ಸ್ವಚ್ಛವಾಗಿದೆ. ಇದೇ ಕ್ರಮವನ್ನು ಮದಗಾನೂರ ಕೆರೆಯಲ್ಲೂ ಕೈಗೊಳ್ಳಲು ಯೋಜಿಸಲಾಗಿದೆ.