ಸಾರಾಂಶ
ನವದೆಹಲಿ: ಕೆಲ ಸಮಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳ ಬಗ್ಗೆ ಮುಕ್ತಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೀಗ ಕೋವಿಡ್ ಸಮಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅನ್ಯ ದೇಶಗಳಿಗೆ ಲಸಿಕೆ ಪೂರೈಸಿ ನೆರವಾದದ್ದನ್ನು ಪ್ರಶಂಸಿಸಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ, ‘ಕೋರೋನಾ ಸಂದರ್ಭದಲ್ಲಿ ಭಾರತದ ಲಸಿಕಾ ರಾಜತಾಂತ್ರಿಕತೆಯು ಅಂತಾರಾಷ್ಟ್ರೀಯ ನಾಯಕತ್ವದ ಪ್ರಬಲ ಉದಾಹರಣೆಯಾಗಿದೆ. ಮೈತ್ರಿ ಉಪಕ್ರಮದಡಿಯಲ್ಲಿ, ಪಶ್ಚಿಮ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಸೇರಿದಂತೆ 100ಕ್ಕೂ ಅಧಿಕ ರಾಷ್ಟ್ರಗಳಿಗೆ ಭಾರತದಲ್ಲೇ ಉತ್ಪಾದಿಸಲಾದ ಲಸಿಕೆಯನ್ನು ಪೂರೈಸುವ ಮೂಲಕ ಅಗತ್ಯವಿದ್ದ ಸಮಯದಲ್ಲಿ ಸಹಾಯಹಸ್ತ ಚಾಚಿತು’ ಎಂದು ತರೂರ್ ಉಲ್ಲೇಖಿಸಿದ್ದಾರೆ. ತಂತ್ರಜ್ಞಾನ ಮತ್ತು ತರಬೇತಿ ಕ್ಷೇತ್ರದಲ್ಲಿ ಭಾರತದ ಸೌಹಾರ್ದಯುತ ಶಕ್ತಿ(ಸಾಫ್ಟ್ ಪವರ್)ಯ ಬಗೆಗಿನ ಲೇಖನ ಇದಾಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆದಿಯಾಗಿ ಇಂಡಿ ಕೂಟದ ನಾಯಕರು, ಮೋದಿ ಸರ್ಕಾರದ ಕೊರೋನಾ ನಿರ್ವಹಣೆಯನ್ನು ಟೀಕಿಸುತ್ತಿರುವ ನಡುವಲ್ಲೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ.
ಸ್ವಪಕ್ಷಕ್ಕೆ ಅಸಮಾಧಾನ:
ಕಳೆದ 10 ದಿನಗಳಲ್ಲಿ 3 ಬಾರಿ ಬಿಜೆಪಿಯನ್ನು ಹೊಗಳಿದ ತರೂರ್ ಬಗ್ಗೆ ಕಾಂಗ್ರೆಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ತರೂರ್ ಅವರಿಗೆ ತಮ್ಮ ಮಾತುಗಳ ಮೇಲೆ ಹಿಡಿತವಿಟ್ಟುಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.
ಮತ್ತೆಮತ್ತೆ ಮೋದಿ ಮೆಚ್ಚುಗೆ
ಈ ಹಿಂದೆಯೂ ತರೂರ್, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೋದಿಯವರ ನಿಲುವನ್ನು ಬೆಂಬಲಿಸಿ ಮಾತನಾಡಿದ್ದರು. ಅದಕ್ಕೂ ಮೊದಲು, ಕಾಂಗ್ರೆಸ್‌ಗೆ ತಮ್ಮ ಸೇವೆಯ ಅಗತ್ಯವಿಲ್ಲದಿದ್ದರೆ ಅನ್ಯ ಆಯ್ಕೆಗಳೂ ಇವೆ ಎಂದಿದ್ದರು.