ಕೇರಳ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ : ಶಶಿ ತರೂರ್‌ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟಾಂಗ್‌

| N/A | Published : Mar 03 2025, 01:51 AM IST / Updated: Mar 03 2025, 04:41 AM IST

ಕೇರಳ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ : ಶಶಿ ತರೂರ್‌ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಕೇರಳದ ಕಾಂಗ್ರೆಸ್‌ ಒಂದಾಗಿ ನಿಂತಿದ್ದು, ನಾವೆಲ್ಲಾ ಒಂದೇ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ನವದೆಹಲಿ: ‘ಕೇರಳದ ಕಾಂಗ್ರೆಸ್‌ ಒಂದಾಗಿ ನಿಂತಿದ್ದು, ನಾವೆಲ್ಲಾ ಒಂದೇ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ, ‘ಕೇರಳ ಕಾಂಗ್ರೆಸ್‌ ಘಟದ ಒಡೆದ ಮನೆಯಾಗಿದೆ. ಅದನ್ನು ಯಾರೂ ಸರಿ ಮಾಡಲು ಪ್ರಯತ್ನಿಸುತ್ತಿಲ್ಲ. ಪಕ್ಷಕ್ಕೆ ನಾನು ಬೇಡ ಎಂದರೆ ನನಗೆ ಬೇರೆ ಬೇರೆ ಅವಕಾಶಗಳಿವೆ’ ಎಂದು ಇತ್ತೀಚೆಗೆ ಹೇಳಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. 

 ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಪೂರಕವಾಗಿ ಇಲ್ಲಿನ ಇಂದಿರಾ ಭವನದಲ್ಲಿ, ಶಿಸ್ತು, ಒಗ್ಗಟ್ಟು, ರಾಜ್ಯ ಸಂಘಟನೆಯ ಬಲವರ್ಧನೆಯನ್ನು ಧ್ಯೇಯವಾಗಿಟ್ಟುಕೊಂಡು ಸಭೆ ನಡೆಸಲಾಗಿತ್ತು. ಈ ವೇಳೆ ರಾಜಕೀಯ ತಂತ್ರಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಪಕ್ಷಕ್ಕೆ ವಿರುದ್ಧವಾಗಿ ಏನನ್ನೂ ಹೇಳಬಾರದು ಅಥವಾ ಮಾಡಬಾರದು ಎಂದು ರಾಹುಲ್‌ ಸೂಚಿಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕೆ. ಸುಧಾಕರನ್‌, ತಿರುವನಂತಪುರಂ ಸಂಸದ ಶಶಿ ತರೂರ್‌ ಸೇರಿ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಫೇಸ್‌ಬುಕ್‌ನಲ್ಲಿ ‘ಟೀಂ ಕೇರಳ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಕೆಲ ನಾಯಕರ ಹೇಳಿಕೆಗಳನ್ನು ಪೋಸ್ಟ್‌ ಮಾಡಿರುವ ರಾಹುಲ್‌, ಒಗ್ಗಟ್ಟು ಪ್ರದರ್ಶನ ಮಾಡಿ ತರೂರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಗಾ ಜೊತೆ ಕಾಣಿಸಿಕೊಂಡಿದ್ದ ನಾಯಕಿ ಶವ ಸೂಟ್‌ಕೇಸಲ್ಲಿ ಪತ್ತೆ

ಚಂಡೀಗಢ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನಡೆಸಿದ್ದ ಭಾರತ್‌ ಜೋಡೋ ಯಾತ್ರೆಯಲ್ಲಿ ಹರ್ಯಾಣದಲ್ಲಿ ಅವರೊಂದಿಗೆ ಕಾಣಿಸಿಕೊಂಡಿದ್ದ ಹರ್ಯಾಣದ ಕಾಂಗ್ರೆಸ್‌ ಕಾರ್ಯಕರ್ತೆ ಹಿಮಾನಿ ನರ್ವಾಲ್ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹರ್ಯಾಣದ ರೋಹ್ಟಕ್‌ ಸಂಪ್ಲಾ ಬ್ ನಿಲ್ದಾಣದ ಬಳಿ ದೊಡ್ಡ ನೀಲಿ ಬಣ್ಣದ ಸೂಟ್‌ಕೇಸ್‌ನಲ್ಲಿ ಶನಿವಾರ 20-22 ವಯೋಮಾನದ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಅದು ಹಿಮಾನಿ ಶವ ಎನ್ನುವುದು ತಿಳಿದಿದೆ.  

ಅಲ್ಲದೇ ಆಕೆಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ.ಇನ್ನು ಮಗಳ ಸಾವಿನ ಬಗ್ಗೆ ಹಿಮಾನಿ ತಾಯಿ ಕಾಂಗ್ರೆಸ್‌ ಕಾರ್ಯಕರ್ತೆ ಸವಿತಾ, ಗಂಭೀರ ಆರೋಪ ಮಾಡಿದ್ದು, ಆಕೆಗೆ ಪಕ್ಷದಲ್ಲಿಯೇ ವೈರಿಗಳಿದ್ದರು. ಪಕ್ಷದಲ್ಲಿ ಬೆಳವಣಿಗೆ ಮತ್ತು ಹಿರಿಯ ನಾಯಕರ ಸಂಪರ್ಕ ಆಕೆಗೆ ಶತ್ರುಗಳನ್ನು ಸೃಷ್ಟಿ ಮಾಡಿತ್ತು. ಹೂಡಾ ಕುಟುಂಬಕ್ಕೆ ಆಪ್ತರಾಗಿದ್ದು ಮತ್ತು ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು ಕೆಲವರಿಗೆ ಅಸೂಯೆ ಹುಟ್ಟಿಸಿತ್ತು. ಇದರಿಂದ ಕೊಲೆ ನಡೆದಿದೆ. ಪಕ್ಷ ಮತ್ತು ರಾಜಕೀಯ ಮಗಳ ಸಾವಿಗೆ ಕಾರಣ ಎಂದಿದ್ದಾರೆ.