ಸಾರಾಂಶ
ನವದೆಹಲಿ: ‘ದೇಶ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ‘ಮೇಕ್ ಇನ್ ಇಂಡಿಯಾ’ ಒಳ್ಳೆಯ ಯೋಜನೆಯಾಗಿದೆ. ಆದರೆ ಅದು ಸೋತಿದೆ. ಆದ್ದರಿಂದಲೇ ಇಂದು ಚೀನಾ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ’ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಸೋಮವಾರ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನಿಸಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮೇಕ್ ಇನ್ ಇಂಡಿಯಾ ಯೋಜನೆಯ ಜಾರಿಯಲ್ಲಿ ಅವರು ಸೋತಿದ್ದಾರೆ. 2014ರಲ್ಲಿ ಜಿಡಿಪಿಯ ಶೇ.15.3ರಷ್ಟಿದ್ದ ಉತ್ಪಾದನೆಯು ಶೇ.12.6ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲೇ ಕನಿಷ್ಠ ಪ್ರಮಾಣ’ ಎಂದು ರಾಹುಲ್ ಹೇಳಿದ್ದಾರೆ.
ದೇಶದಲ್ಲಿನ ನಿರುದ್ಯೋಗದ ಬಗ್ಗೆ ಮಾತನಾಡುತ್ತಾ, ‘ಕಾಂಗ್ರೆಸ್ ನೇತೃತ್ವದ ಯುಪಿಎ ಆಗಲಿ, ಬಿಜೆಪಿ ನಾಯಕತ್ವದ ಎನ್‌ಡಿಎ ಆಗಲಿ, ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಶಕ್ತಿ ಹಾಗೂ ಸಾರಿಗೆ ಕ್ರಾಂತಿಯನ್ನು ಚೀನೀಯರಿಗೆ ಬಿಟ್ಟುಕೊಡುವ ಬದಲು ದಲಿತರು, ಬುಡಕಟ್ಟು ಹಾಗೂ ಹಿಂದುಳಿದವರಿಗೆ ಅವಕಾಶ ನೀಡಬೇಕು. ಆದರೆ ನಾವು ನಮ್ಮ ದೇಶದಲ್ಲಿ ಉತ್ಪಾದನೆಯನ್ನು ಚೀನೀಯರಿಗೆ ಬಿಟ್ಟುಕೊಟ್ಟಿದ್ದೇವೆ. ಕ್ರಾಂತಿಯಲ್ಲಿ ಅವರು ನಮಗಿಂತ 10 ವರ್ಷ ಮುಂದಿದ್ದಾರೆ’ ಎಂದರು.
‘ನಮ್ಮ ದೇಶದೊಳಗೆ ಚೀನೀಯರು ಇರುವುದನ್ನು ಪ್ರಧಾನಿ ನಿರಾಕರಿಸುತ್ತಿದ್ದಾರೆ. ಆದರೆ ಸೇನಾ ಸಿಬ್ಬಂದಿ ಮುಖ್ಯಸ್ಥರು ಇದನ್ನು ಖಚಿತಪಡಿಸಿದ್ದಾರೆ. ನಮ್ಮ ಸೇನೆಯವರೂ ಚೀನೀ ಸೇನೆಯೊಂದಿಗೆ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. ಇದಕ್ಕೆಲ್ಲಾ ಕಾರಣ ಭಾರತ ಉತ್ಪಾದನೆಯಲ್ಲಿ ಉದಾಸೀನತೆ ತೋರುತ್ತಿರುವುದು’ ಎಂದು ರಾಹುಲ್ ಹೇಳಿದ್ದಾರೆ.
ಬಜೆಟ್ ತಯಾರಿಕೆ ಹಲ್ವಾ ಯಾರಿಗೆ ಹಂಚಿದ್ದಾರೋ ಗೊತ್ತಿಲ್ಲ: ರಾಗಾ ವ್ಯಂಗ್ಯ
ನವದೆಹಲಿ: ಬಜೆಟ್ ಹಿನ್ನೆಲೆ ನಡೆಸುವ ಸಾಂಪ್ರದಾಯಿಕ ಹಲ್ವಾ ತಯಾರಿ ಕಾರ್ಯಕ್ರಮದ ಫೋಟೋ ಬಿಡುಗಡೆಗೊಳಿಸದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಬಾರಿ ‘ಹಲ್ವಾ ಹಂಚಿದ್ದಾರೆ, ಆದರೆ ಯಾರಿಗೆ ಹಂಚಿದ್ದಾರೆ ಎಂಬ ಮಾಹಿತಿ ಇಲ್ಲ. ಹಲ್ವಾ ತಯಾರಿ ಕಾರ್ಯಕ್ರಮದ ಫೋಟೋ ಸಹ ಲಭ್ಯವಿಲ್ಲ’ ಎಂದು ಸರ್ಕಾರದ ಕಾಲೆಳೆದಿದ್ದಾರೆ. ಹಲ್ವಾ ತಯಾರಿ ಕಾರ್ಯಕ್ರಮದಲ್ಲಿ ಒಬಿಸಿ, ಬುಡಕಟ್ಟು ಅಥವಾ ದಲಿತ ಅಧಿಕಾರಿಗಳು ಇರಲೇ ಇಲ್ಲ ಎಂದು ಕಳೆದ ವರ್ಷ ರಾಹುಲ್ ಟೀಕಿಸಿದ್ದರು. ಅದೇ ಕಾರಣಕ್ಕಾಗಿ ಸರ್ಕಾರ ಈ ಬಾರಿ ಫೋಟೋ ಬಿಡುಗಡೆ ಮಾಡಿಲ್ಲ ಎಂದು ಪರೋಕ್ಷವಾಗಿ ಸರ್ಕಾರವನ್ನು ರಾಹುಲ್ ವ್ಯಂಗ್ಯವಾಡಿದ್ದಾರೆ.
ಕುಂಭಮೇಳ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ‘ಸಾವಿರಾರು’ ಜನರಿಗೆ ಖರ್ಗೆ ಸಂತಾಪ
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಜ.29ರ ಮೌನಿ ಅಮಾವಾಸ್ಯೆಯಂದು ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಸಾವಿರಾರು’ ಮಂದಿ ಮೃತರು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ವಂದನಾರ್ಪಣೆ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಖರ್ಗೆ ಹೀಗೆ ಹೇಳಿದ್ದಾರೆ. ಬಳಿಕ, ‘ಯಾರನ್ನೂ ದೂಷಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಎಷ್ಟು ಜನ ಸಾವನ್ನಪ್ಪಿದ್ದರು ಎಂಬ ಮಾಹಿತಿಯನ್ನು ಸರ್ಕಾರ ಕೊಡಲಿ. ನಾನು ಹೇಳಿದ್ದು ತಪ್ಪಿದ್ದರೆ ಕ್ಷಮೆ ಯಾಚಿಸಿ ತಿದ್ದಿಕೊಳ್ಳುತ್ತೇನೆ’ ಎಂದೂ ಹೇಳಿದ್ದಾರೆ.
ಅವರ ಈ ಹೇಳಿಕೆಗೆ ಆಡಳಿತ ಪಕ್ಷ ಆಕ್ಷೇಪ ವ್ಯಕ್ತಪಡಿಸಿದರೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹೇಳಿಕೆಯನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ‘ವಿಪಕ್ಷದ ನಾಯಕರು ಕಾಲ್ತುಳಿತ ಘಟನೆಯಲ್ಲಿ ಸಾವಿರಾರು ಜನ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಅವರು ಸದನದಲ್ಲಿ ಏನೇ ಮಾತಾಡಿದರೂ ಮಹತ್ವ ಪಡೆಯುತ್ತದೆ. ನಿಮ್ಮ ಹೇಳಿಕೆಯಿಂದ ಜಗತ್ತಿಗೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಧನಕರ್ ಹೇಳಿದ್ದಾರೆ.