ಎಲ್ಡಿಎಫ್‌, ಮೋದಿ ಮೆಚ್ಚಿದ ಸಂಸದ ಶಶಿ ತರೂರ್‌ಗೆ ಕಾಂಗ್ರೆಸ್ ಮುಖವಾಣಿ ವೀಕ್ಷಣಂ ಚಾಟಿ

| N/A | Published : Feb 18 2025, 12:35 AM IST / Updated: Feb 18 2025, 04:16 AM IST

ಸಾರಾಂಶ

ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ಅಡಿಯಲ್ಲಿ ಕೇರಳದ ಉದ್ಯಮಶೀಲ ಬೆಳವಣಿಗೆಯನ್ನು ಶ್ಲಾಘಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬರೆದ ಲೇಖನವು ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಾಗಿಸಿದೆ.

ತಿರುವನಂತಪುರಂ: ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ಅಡಿಯಲ್ಲಿ ಕೇರಳದ ಉದ್ಯಮಶೀಲ ಬೆಳವಣಿಗೆಯನ್ನು ಶ್ಲಾಘಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬರೆದ ಲೇಖನವು ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಾಗಿಸಿದೆ. ಲೇಖನದಲ್ಲಿ ಎಲ್‌ಡಿಎಫ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದ ತರೂರ್, ಸರ್ಕಾರ ಉದ್ಯಮಶೀಲತೆಗೆ ಅಪಾರ ಕೊಡುಗೆ ಕೊಟ್ಟಿದೆ ಎಂದಿದ್ದರು. ಅದಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿ ಕುರಿತಾಗಿಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದು ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಕೇರಳ ಕಾಂಗ್ರೆಸ್ ಮುಖವಾಣಿ ವೀಕ್ಷಣಂ ದಿನಪತ್ರಿಕೆ ತರೂರ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಪಕ್ಷದ ಸಾವಿರಾರು ಕಾರ್ಯಕರ್ತರ ನಿರೀಕ್ಷೆಗಳಿಗೆ ದ್ರೋಹ ಬಗೆಯಬೇಡಿ ಎಂದು ತನ್ನ ಸಂಪಾದಕೀಯದಲ್ಲಿ ಚಾಟಿ ಬೀಸಿದೆ. ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸದಂತೆ ಎಚ್ಚರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಲು ವಿಫಲವಾದರೆ ಅದಕ್ಕೆ ನೇರ ಹೊಣೆಯಾಗಬೇಕಾದೀತು ಎಂದು ಎಚ್ಚರಿಸಿದೆ.