ಪಂಚ ಪೀಠಗಳಲ್ಲಿ ಅಗ್ರಗಣ್ಯ ಉಜ್ಜಯನಿ ಶ್ರೀ ಮರಳುಸಿದ್ದೇಶ್ವರ ಸ್ವಾಮಿ ಮಹಾರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.

ಕೊಟ್ಟೂರು: ಪಂಚ ಪೀಠಗಳಲ್ಲಿ ಅಗ್ರಗಣ್ಯ ಉಜ್ಜಯನಿ ಶ್ರೀ ಮರಳುಸಿದ್ದೇಶ್ವರ ಸ್ವಾಮಿ ಮಹಾರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.

ಉಜ್ಜಯನಿ ಜಗದ್ಗುರು ಸಿದ್ದಲಿಂಗರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯೊಂದಿಗೆ ನೂರಾರು ಶಿವಾಚಾರ್ಯರು ರಥದ ಬಳಿರುವ ಮಂಟಪ್ಪದಲ್ಲಿ ಆಸೀನರಾಗಿದ್ದರು .

ಶ್ರೀ ಮರಳುಸಿದ್ದ ಸ್ವಾಮಿ ಮೂರ್ತಿಯನ್ನು ದೇವಸ್ಥಾನದ ಪಲ್ಲಕ್ಕಿ ಉತ್ಸವದೊಂದಿಗೆ ಪೂಜಾಕರ್ತರು ಮಧ್ಯಾಹ್ನದ ಪೂಜೆಯ ನಂತರ ವಿವಿಧ ವಾಧ್ಯಗಳೊಂದಿಗೆ ರಥದ ಬಳಿ ಧಾರ್ಮಿಕ ಪದ್ಧತಿ ಅನುಗುಣವಾಗಿ ತಂದರು.

ಉತ್ಸವ ಮೂರ್ತಿಯನ್ನು ರಥದ ಸುತ್ತಲೂ ಪ್ರದಕ್ಷಣೆ ಹಾಕಿಸಿ ನಂತರ ರಥ ಏರಿ ಪ್ರತಿಷ್ಠಾಪಿಸಲಾಯಿತು. ನಂತರ ಶ್ರೀ ಸ್ವಾಮೀಯ ಪಟಾಕ್ಷಿ ಸವಾಲಿನ ಹರಾಜು ಪ್ರಕ್ರಿಯೆ ನಡೆಯಿತು.

ಭಕ್ತ ಬಂಗಾರ ನಾಯ್ಕನಹಳ್ಳಿ ವಿರೂಪಾಕ್ಷಯ್ಯ ₹3,00,001ಗೆ ಕೂಗಿ ತಮ್ಮದಾಗಿಸಿಕೊಂಡು ಭಕ್ತಿ ಸಮರ್ಪಿಸಿದರು. ನಂತರ ರಥೋತ್ಸವ ಚಾಲನೆ ಪಡೆದುಕೊಂಡಿತು. ಸಮಾಳ, ನಂದಿಕೋಲು ಮತ್ತಿತರ ವಾದ್ಯಗಳೊಂದಿಗೆ ರಥೋತ್ಸವ ಗಂಭೀರ ನಡೆಯೊಂದಿಗೆ ಸಾಗುತ್ತಿದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ಶ್ರೀ ಸ್ವಾಮಿಗೆ ಜಯ ಘೋಷಗಳನ್ನು ಕೂಗುತ್ತ ನಮಿಸಿದರು. ರಥೋತ್ಸವ ಪಾದಗಟ್ಟಿ ಮುಟ್ಟಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಪುನಃ ಮೂಲ ಸ್ಥಾನಕ್ಕೆ ಮರಳಿತು.

ಶಾಸಕರಾದ ಕೂಡ್ಲಿಗಿಯ ಡಾ. ಎನ್.ಟಿ. ಶ್ರೀನಿವಾಸ, ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್, ಮಾಜಿ ಸಚಿವ ಬಿ. ಶ್ರೀರಾಮುಲು ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.