ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸದೆ, ಗ್ಯಾರಂಟಿಗಾಗಿ ಹಾಗೂ ಹೈಕಮಾಂಡ್‌ಗೆ ನೀಡಲು ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಸುವ ಮೂಲಕ ಒಂದು ರೀತಿಯಲ್ಲಿ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ಆರೋಪಿಸಿದರು.ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳನ್ನು ಮಾಡಿ ಭ್ರಷ್ಟಾಚಾರದಲ್ಲೇ ಮುಳುಗಿರುವ ಸರ್ಕಾರ, ಒಂದು ತಪ್ಪನ್ನು ಮುಚ್ಚಿಹಾಕಲು ಬೇರೆ ವಿಷಯವನ್ನು ತೆಗೆದುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದೆ. ಇದನ್ನು ಪ್ರಶ್ನಿಸುವವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ಪೊಲೀಸ್ ಕೇಸ್ ಹಾಕಿಸುವ ಮೂಲಕ ಯಾರೂ ಪ್ರಶ್ನೆ ಮಾಡದಂತೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
೧೯೭೫ರ ಜೂ.೨೫ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಯಾವುದೇ ಕಾರಣವಿಲ್ಲದೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿಯನ್ನು ತಂದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಭೇದ ಮಾಡದೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಸುಭದ್ರ ಭಾರತ ಕಟ್ಟುತ್ತಿದ್ದಾರೆ. ಇಡೀ ಪ್ರಪಂಚದಲ್ಲೇ ಭಾರತವು ಆರ್ಥಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಇದನ್ನು ಸಹಿಸಿಕೊಳ್ಳದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವೃಥಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮಾತೆತ್ತಿದರೆ ಬಿಜೆಪಿಯವರು ಸಂವಿಧಾನ ವಿರೋಧಿ ಎಂದು ಆರೋಪ ಮಾಡುತ್ತಾರೆ. ಸಂವಿಧಾನ ವಿರುದ್ಧವಾಗಿ ಯಾವ ತಪ್ಪು ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.ಕಾವೇರಿ ಆರತಿಗೆ ವಿರೋಧವಿಲ್ಲ:
ಸರ್ಕಾರ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿಗೆ ಬಿಜೆಪಿಯಿಂದ ಯಾವುದೇ ವಿರೋಧವಿಲ್ಲ. ಆದರೆ, ಇತಿಹಾಸ ಪ್ರಸಿದ್ಧ ಕೆಆರ್‌ಎಸ್. ಅಣೆಕಟ್ಟೆಗೆ ಧಕ್ಕೆಯಾಗದಂತೆ ಮಾಡಲಿ. ಒಂದು ವೇಳೆ ಕಾವೇರಿ ಆರತಿ ಕಾಮಗಾರಿಗಳಿಂದ ತೊಂದರೆಯಾದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಎಚ್ಚರಿಕೆ ನೀಡಿದರು.ಕಾವೇರಿ ಆರತಿಗೆ ೯೨ ಕೋಟಿ ರು.ಗಳನ್ನು ಮೀಸಲಿಟ್ಟಿರುವುದು ದೊಡ್ಡ ದುರಂತ. ಈ ಹಣದಲ್ಲಿ ೧೦ ರಿಂದ ೨೦ ಕೋಟಿ ಖರ್ಚು ಮಾಡಿ ಉಳಿದ ಹಣವನ್ನು ಇದನ್ನು ಮಾಡಲು ಹೊರಟಿರುವವರು ಹಾಗೂ ಶಾಸಕರು ಲೂಟಿ ಹೊಡೆಯುವ ತಂತ್ರವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ನಮಗೆ ಅನುಮತಿ ನೀಡಿದ್ದೇಯಾದಲ್ಲಿ ಬಿಜೆಪಿ ವತಿಯಿಂದಲೇ ಯಾವುದೇ ಶುಲ್ಕವನ್ನು ಜನರಿಗೆ ವಿಧಿಸಿದೆ ಉಚಿತವಾಗಿ ‘ಕಾವೇರಿ ಆರತಿ’ಯನ್ನು ಮಾಡಲಾಗುವುದು ಎಂದರು.
ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ವಿರೋಧ:ರೈತರ ಜಮೀನನ್ನು ವಶಪಡಿಸಿಕೊಂಡು, ಪರಿಸರಕ್ಕೆ ಧಕ್ಕೆಯಾಗುವಂತೆ ಕೆ.ಆರ್.ಎಸ್.ನಲ್ಲಿ ಸಾವಿರಾರು ಕೋಟಿ ರೂ.ಗಳಲ್ಲಿ ಸರ್ಕಾರ ನಿರ್ಮಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಬಿಜೆಪಿ ವಿರೋಧವಿದೆ. ಕೆ.ಆರ್.ಎಸ್. ಅಣೆಕಟ್ಟೆಯು ಒಂದೇ ಶಿಲೆಯ ಪದರದ ಮೇಲೆ ನಿರ್ಮಾಣವಾಗಿದ್ದು, ಅಮ್ಯೂಸ್‌ಮೆಂಟ್ ಪಾರ್ಕ್ ಆದರೆ ಅಣೆಕಟ್ಟೆಗೆ ಧಕ್ಕೆಯಾಗಲಿದೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಬಿಜೆಪಿ ಮುಖಂಡರಾದ ಸಿ.ಟಿ. ಮಂಜುನಾಥ್, ನಾಗಾನಂದ, ಮನೋಜ್, ಪ್ರಸನ್ನ, ಮಂಗಳಾ ನವೀನ್ ಗೋಷ್ಠಿಯಲ್ಲಿದ್ದರು.