ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಇಲ್ಲಸಲ್ಲದ ಆರೋಪ

| Published : Aug 19 2025, 01:00 AM IST

ಸಾರಾಂಶ

ಅನಾಮಿಕ ಹೇಳಿದಂತೆ ಎಸ್‌ಐಟಿ ಅಧಿಕಾರಿಗಳು ಎಲ್ಲ ಕಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಎಲ್ಲಿಯೂ ಏನೂ ಸಿಕ್ಕಿಲ್ಲ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ದೂರುದಾರ ಹೇಳಿದಂತೆಲ್ಲಾ ಕೇಳಿ ಆಗಿದೆ. ಈಗ ಸುಳ್ಳು ಹೇಳಿದವರ ವಿರುದ್ಧ ಕ್ರಮ ಆಗಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಗ್ರಹಿಸಿದರು.

ಪತ್ರಿಕೆಯೊಂದಿಗೆ ಸೋಮವಾರ ಮಾತನಾಡಿದ ಅವರು, ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಸಿ ಬಳಿಯಲು ಯತ್ನಿಸಿರುವ ಅನಾಮಿಕ ಮತ್ತು ಅವನ ಹಿಂದೆ ಇರುವ ದುಷ್ಟರ ಕೂಟಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ರೀಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರಲು ಷಡ್ಯಂತ್ರ ಮಾಡುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಡಿಕೆಶಿ ಅವರ ನಿಲುವಿಗೆ ನಾನೂ ಕೂಡ ಸಾಥ್ ನೀಡುತ್ತೇನೆ ಎಂದರು.

ಅನಾಮಿಕ ಹೇಳಿದಂತೆ ಎಸ್‌ಐಟಿ ಅಧಿಕಾರಿಗಳು ಎಲ್ಲ ಕಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಎಲ್ಲಿಯೂ ಏನೂ ಸಿಕ್ಕಿಲ್ಲ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ದೂರುದಾರ ಹೇಳಿದಂತೆಲ್ಲಾ ಕೇಳಿ ಆಗಿದೆ. ಈಗ ಸುಳ್ಳು ಹೇಳಿದವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಮಠ ಮಾನ್ಯಗಳು ನಮಗೆ ನೆಮ್ಮದಿ ಕೊಡುತ್ತವೆ. ನಾವ್ಯಾರು ದೇವರನ್ನು ನೋಡಿಲ್ಲ. ಆದರೆ, ಶಕ್ತಿ ಕೇಂದ್ರದ ಮೂಲಕ ನೆಮ್ಮದಿ ಕಂಡು ಕೊಳ್ಳುತ್ತೇವೆ. ವಿರೇಂದ್ರ ಹೆಗ್ಗಡೆ ಕುಟುಂಬ ಧರ್ಮಸ್ಥಳವನ್ನು ಬಹಳ ಉತ್ತಮವಾಗಿ ನಿಭಾಯಿಸುತ್ತಿದೆ. ಶ್ರೀಕ್ಷೇತ್ರದ ಮೇಲೆ ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪಸ್ವಾಮಿಯ ಆಶೀರ್ವಾದ ಸದಾ ಇರಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಆಣೆ ಪ್ರಮಾಣ ಮಾಡಿದ್ದರಿಂದ ಅವರಿಬ್ಬರಿಗೆ ಏನಾಗಿದೆ ಅಂತ ನಾವೇಲ್ಲ ನೋಡಿದ್ದೇವೆ. ಅಂತಹ ಪುಣ್ಯಕ್ಷೇತ್ರದ ವಿರುದ್ಧ ಆರೋಪ ಮಾಡಿದವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.