ಮಂಗಳೂರು: ಸಮಾಜ ಒಗ್ಗೂಡುವುದರಿಂದ ಭವಿಷ್ಯದ ಸಕಲ ಅನಾಹುತಗಳನ್ನು ಎದುರಿಸುವ ಬೃಹತ್ ಶಕ್ತಿ ಮೂಡುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಕೋಡಿಕಲ್ ವಿಪ್ರ ವೇದಿಕೆ ವತಿಯಿಂದ ಕೋಡಿಕಲ್‌ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.ವಿಪ್ರ ಸಮೂಹ ಲೋಕಕ್ಕೆ ಮಾರ್ಗದರ್ಶನ ನೀಡಬಲ್ಲುದಾಗಿದೆ. ಬ್ರಹ್ಮ ತೇಜೋ ಬಲಂ ಎಂಬುದನ್ನು ನಮ್ಮ ಹಿರಿಯರು ಸಾಧಿಸಿ ತೋರಿಸಿದ್ದಾರೆ. ಅದನ್ನು ಅನುಭವಿಸುವ ನಾವು ಅದನ್ನು ಯಥಾವತ್ತಾಗಿ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.ಮುಂದಿನ ತಿಂಗಳು ನಡೆಯಲಿರುವ ದಶಮಾನೋತ್ಸವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಸಂಸ್ಥಾಪಕ ವೇ.ಮೂ. ವಿಶ್ವಕುಮಾರ್ ಜೋಯಿಸ್ ಹಾಗೂ ವೃಂದಾ ಪಾದಪೂಜೆ ನಡೆಸಿಕೊಟ್ಟರು. ಗೌರವಾಧ್ಯಕ್ಷ, ಹಿರಿಯ ವಕೀಲ ಜಯರಾಮ ಪದಕಣ್ಣಾಯ ಶುಭ ಹಾರೈಸಿದರು.
ವೇದಿಕೆಯ ಸದಸ್ಯರ ಮಕ್ಕಳಾದ ಧಾತ್ರಿ, ಸಿಂಚನ ಹಾಗೂ ವಿಕ್ರಮ್ ಅವರನ್ನು ನಗದು ಸಹಿತ ಶ್ರೀಗಳು ಗೌರವಿಸಿದರು. ಪ್ರಾಯೋಜಕರಾದ ಭಾರತಿ ಮತ್ತು ರಾಮಮೂರ್ತಿ ಭಟ್ ಡಿ., ಅಪರ್ಣಾ ಉಪಾಧ್ಯಾಯ ಮತ್ತು ಅನಂತ ಪದ್ಮನಾಭ ಉಪಾಧ್ಯಾಯ, ಗಂಗಾಲಕ್ಷೀ ಮತ್ತು ಪುರುಷೋತ್ತಮ ಭಟ್, ಪದಕಣ್ಣಾಯ, ಪ್ರಭಾವತಿ ಮಡಿ, ಉಪಾಧ್ಯಕ್ಷ ತೆಕ್ಕೆಕೆರೆ ವಿಶ್ವೇಶ್ವರ ಭಟ್ ಮತ್ತು ದಾಕ್ಷಾಯಣಿ, ಶ್ರೀಧರ ಹೊಳ್ಳ ಅವರನ್ನು ಅಭಿನಂದಿಸಲಾಯಿತು. ವಿದ್ಯಾ ಗಣೇಶ ರಾವ್ ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ವಾಚಿಸಿದರು.ಶ್ರೀ ಹಯಗ್ರೀವ ಭಜನಾ ಮಂಡಳಿಯವರಿಂದ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಸೀತಾಲಕ್ಷ್ಮೀ ನಿರ್ವಹಿಸಿದರು.ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿಶೋರ್‌ಕೃಷ್ಣ ವಂದಿಸಿದರು. ಸಂಸ್ಥಾಪಕ ಶ್ರೀಧರ ಹೊಳ್ಳ ನಿರೂಪಿಸಿದರು.