ವಿಶೇಷ ವರದಿ

ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಚಿಂಚಲಿ ನೀಲಗುಂದ, ಕಲ್ಲೂರು ಸೇರಿದಂತೆ ಅನಿಯಮಿತವಾಗಿ ವಿದ್ಯುತ್ ಕಡಿತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಪಟ್ಟಣಕ್ಕೆ ಹೆಸ್ಕಾಂನ ವಿಭಾಗೀಯ ಕಚೇರಿಯಿದ್ದು, ಇಲ್ಲಿ ಆಗುವಷ್ಟು ವಿದ್ಯುತ್ ಕಡಿತ ಬೇರೆಲ್ಲಿಯೂ ಆಗುವುದಿಲ್ಲ. ಒಟ್ಟು 19 ಜನ ಲೈನಮನ್‌ಗಳಿದ್ದು, ಒಬ್ಬರು ಸೆಕ್ಷನ್ ಆಫೀಸರ್ ಇದ್ದಾರೆ. ಅನಿಯಮಿತವಾಗಿ ಹಗಲು- ರಾತ್ರಿ ಕೂಡಾ ಮಿತಿ ಇಲ್ಲದೇ ವಿದ್ಯುತ್‌ ಕಡಿತವಾಗುತ್ತಿದೆ. ಸೊಳ್ಳೆಗಳ ಕಾಟ: ಪಪಂ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಅಲ್ಲದೇ ಅವೈಜ್ಞಾನಿಕ ಚರಂಡಿ ನಿರ್ಮಾಣವಾಗಿರುವುದರಿಂದ ಚರಂಡಿ ನೀರು ಮುಂದೆ ಸಾಗದೇ ನಿಂತಲ್ಲಿಯೇ ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ರಾತ್ರಿ ಮಲಗುವ ಸಮಯಕ್ಕೆ ಸರಿಯಾಗಿ ವಿದ್ಯುತ್ ಕಡಿತವಾಗಿ ಸಾರ್ವಜನಿಕರ ನಿದ್ದೆಗೆಡಿಸುವಂತಾಗಿದೆ. ಈ ಹಿಂದೆ ಕೆಲವು ವರ್ಷಗಳ ಹಿಂದೆ ಇದ್ದ ಸಿಬ್ಬಂದಿ ಸೈಕಲ್ ಮೇಲೆ ತಿರುಗುತ್ತಿದ್ದರು. ಆದರೆ ವಿದ್ಯುತ್ ಕಡಿತ ಕಡಿಮೆ ಇತ್ತು. ಇಂದು ಬೈಕಗಳಿದ್ದು, ಹೆಚ್ಚು ಸಿಬ್ಬಂದಿಯಿದ್ದರೂ ವಿದ್ಯುತ್‌ ಕಡಿತವಾದರೆ ತಾಸುಗಟ್ಟಲೆ ಬರುವುದೇ ಇಲ್ಲ. ಕೇಳಿದರೇ ಲೈನ್‌ ಫಾಲ್ಟ್‌ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಕೆಲವೊಮ್ಮೆ 6- 8 ಗಂಟೆ ಕಳೆದರೂ ಲೈನ್‌ ಫಾಲ್ಟ್‌ ಎಲ್ಲಿಯಾಗಿದೆ ಎಂದು ಸಿಕ್ಕೇ ಇಲ್ಲ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.ರಾತ್ರಿ ವೇಳೆ ವಿದ್ಯುತ್ ಕಡಿತವಾದರೆ ಮತ್ತೆ ಬರುವುದು ಬೆಳಗ್ಗೆಯೇ. ಅಲ್ಲಿಯವರೆಗೆ ಸಿಬ್ಬಂದಿ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇದರಿಂದ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.ನೀರಿನ ಸಮಸ್ಯೆ: ಪಟ್ಟಣದಲ್ಲಿ 34 ಪಪಂಗೆ ಸಂಬಂಧಿಸಿದ ನೀರು ಸರಬರಾಜು ಮಾಡುವ ಬೋರವೆಲ್‌ಗಳಿವೆ. ಅವುಗಳೆಲ್ಲ ವಿದ್ಯುತ್ ಮೇಲೆ ಅವಲಂಬಿತವಾಗಿರುವುದರಿಂದ ಕೆಲವು ಸಂದರ್ಭಗಳಲ್ಲಿ ನೀರಿನ ಸಮಸ್ಯೆಯೂ ಬೃಹದಾಕಾರವಾಗಿ ಬಿಗಡಾಯಿಸುತ್ತಿದೆ.

ಪ್ರಾರಂಭವಾಗದ ವಿದ್ಯುತ್ ಗ್ರಿಡ್: ವಿದ್ಯುತ್ ಕಡಿತವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ದಶಕಗಳಿಂದ ಗ್ರಿಡ್ ನಿರ್ಮಾಣ ಮಾಡುವಂತೆ ಸಾರ್ವಜನಿಕರ ಒತ್ತಾಯವಿದ್ದರೂ ಭೂಮಿ ಖರೀದಿ ಪ್ರಕ್ರಿಯೆ ಮುಗಿದು ತಂತಿಬೇಲಿ ಅಳವಡಿಸುವ ಕೆಲಸ ನಡೆದಿದ್ದರೂ ಕಳೆದ 15- 20 ದಿನಗಳಿಂದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಇದು ಹೀಗೆಯೇ ಮುಂದುವರಿದರೆ ಸಾರ್ವಜನಿಕರು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವೋಲ್ಟೇಜ್ ಸಮಸ್ಯೆ: ಗದಗ ಗ್ರಿಡ್‌ನಿಂದ ಪೂರೈಕೆಯಾಗುವ ವಿದ್ಯುತ್ ಮುಳಗುಂದ ತಲುಪುವ ವೇಳೆಗೆ ಅಂದಾಜು ಎಲ್ಲ ಗ್ರಾಮಗಳಲ್ಲಿನ ಲೈನ್, ಹೊಲಗಳಲ್ಲಿನ ಲೈನ್ ಸೇರಿ ಒಟ್ಟು 40 ಕಿಮೀ ಸಂಚರಿಸಬೇಕು. ಹಾಗಾಗಿ ಮುಳಗುಂದ ಪಟ್ಟದಲ್ಲಿ ತೀವ್ರವಾದ ವೋಲ್ಟೇಜ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಕೊಳವೆಬಾವಿ, ಗಿರಣಿಗಳು ಪ್ರಾರಂಭವಾಗುವುದೇ ದುಸ್ತರವಾಗುತ್ತಿದೆ.

ನನೆಗುದಿಗೆ: ಗದಗ ವಿಧಾನಸಭಾ ಕ್ಷೇತ್ರದಲ್ಲಿಯೇ ದೊಡ್ಡ ಪಟ್ಟಣವಾಗಿರುವ ಮುಳಗುಂದದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವಿದ್ಯುತ್ ಗ್ರಿಡ್ ನಿರ್ಮಾಣ ನನೆಗುದಿಗೆ ಬಿದ್ದಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಗೂ ಬರ ಬಂದಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಭೀಮರಾಯಪ್ಪ ಕೋಳಿ ತಿಳಿಸಿದರು.


ಸಾರ್ವಜನಿಕರಿಗೆ ತೊಂದರೆ: ವಿದ್ಯುತ್ ಕಡಿತ ಇತ್ತೀಚೆಗೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ನೀರಿನ ಕೊರತೆಯಿಂದ ನೀರಾವರಿ ಬೆಳೆಗಳಿಗೂ ತೊಂದರೆಯಾಗುತ್ತಿದ್ದು, ಬೆಳೆಗಳು ಕುಂಠಿತವಾಗುತ್ತಿವೆ. ಸಮಸ್ಯೆ ಸರಿಪಡಿಸದಿದ್ದರೆ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ರೈತ ದೇವರಾಜ ಸಂಗನಪೇಟಿ ತಿಳಿಸಿದರು.

ಲೈನ್ ಫಾಲ್ಟ್: ಗದಗದಿಂದ ಮಾಗಡಿಯವರೆಗೆ ಲೈನ್ ಉದ್ದವಾಗಿರುವುದರಿಂದ ಲೈನ್ ಫಾಲ್ಟ್ ಎಲ್ಲಿಯಾಗಿದೆ ಎಂದು ತಿಳಿದುಕೊಳ್ಳುವುದು ತಡವಾಗುತ್ತದೆ. ಇದರಿಂದ ನಾವು 25 ಕಿಮೀ ಜತೆಗೆ ಅಕ್ಕಪಕ್ಕದ ಲೈನಗಳಲ್ಲಿಯೂ ಸಮಸ್ಯೆ ಹುಡುಕುವುದು ತೊಂದರೆಯಾಗುತ್ತಿದೆ. ಗ್ರಿಡ್ ನಿರ್ಮಾಣವಾದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಮುಳಗುಂದದ ಹೆಸ್ಕಾಂ ಸೆಕ್ಷನ್ ಆಫೀಸರ್ ಪ್ರವೀಣ ಅಸೂಟಿ ತಿಳಿಸಿದರು.

ಗದಗದಿಂದ ಮಾಗಡಿಯವರೆಗೆ ಲೈನ್ ಉದ್ದವಾಗಿರುವುದರಿಂದ ಲೈನ್ ಫಾಲ್ಟ್ ಎಲ್ಲಿಯಾಗಿದೆ ಎಂದು ತಿಳಿದುಕೊಳ್ಳುವುದು ತಡವಾಗುತ್ತದೆ. ಇದರಿಂದ ನಾವು 25 ಕಿಮೀ ಜತೆಗೆ ಅಕ್ಕಪಕ್ಕದ ಲೈನಗಳಲ್ಲಿಯೂ ಸಮಸ್ಯೆ ಹುಡುಕುವುದು ತೊಂದರೆಯಾಗುತ್ತಿದೆ. ಗ್ರಿಡ್ ನಿರ್ಮಾಣವಾದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಮುಳಗುಂದದ ಹೆಸ್ಕಾಂ ಸೆಕ್ಷನ್ ಆಫೀಸರ್ ಪ್ರವೀಣ ಅಸೂಟಿ ತಿಳಿಸಿದರು.