ಕೇಂದ್ರ-ರಾಜ್ಯ ಸರ್ಕಾರಗಳಿಂದ ಅವೈಜ್ಞಾನಿಕ ಆರ್ಥಿಕ ನೀತಿ: ವೆಂಕಟಗಿರಿಯಯ್ಯ

| Published : Feb 05 2025, 12:31 AM IST

ಕೇಂದ್ರ-ರಾಜ್ಯ ಸರ್ಕಾರಗಳಿಂದ ಅವೈಜ್ಞಾನಿಕ ಆರ್ಥಿಕ ನೀತಿ: ವೆಂಕಟಗಿರಿಯಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸಹಯೋಗದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಧಃಪತನಗೊಳಿಸಿ ಜನಸಾಮಾನ್ಯರ ಕೈಗೆಟುಕದಂತೆ ಮಾಡಿರುವುದು ಖಂಡನೀಯ. ಖಾಸಗಿ ಬಂಡವಾಳಶಾಹಿ ಮೈಕ್ರೋ ಫೈನಾನ್ಸ್‌ಗಳ ಜನವಿರೋಧಿ ಮತ್ತು ಧನದಾಹಿ ಕಪಿಮುಷ್ಠಿಯಲ್ಲಿ ಸಾಲಗಾರರಾಗಿ ಸಿಲುಕಿರುವುದು 76 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರಗಳ ಅಭಿವೃದ್ಧಿ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದ ಜನ ಸಾಮಾನ್ಯರ ವಿದ್ಯೆ, ಆರೋಗ್ಯ, ಅಭ್ಯುದಯಕ್ಕೆ ಮತ್ತು ಮೂಲಸೌಲಭ್ಯಗಳೀಗೆ ಪೂರಕವಾದ ಮತ್ತು ಮೌಲ್ಯಯುತವಾದ ಆರ್ಥಿಕ ಹಾಗೂ ಯೋಜನಾ ನೀತಿಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಿಫಲವಾಗಿವೆ ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಬಣ) ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದರು.

ಸರ್ಕಾರಿ ಸಹಯೋಗದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಧಃಪತನಗೊಳಿಸಿ ಜನಸಾಮಾನ್ಯರ ಕೈಗೆಟುಕದಂತೆ ಮಾಡಿರುವುದು ಖಂಡನೀಯ. ಖಾಸಗಿ ಬಂಡವಾಳಶಾಹಿ ಮೈಕ್ರೋ ಫೈನಾನ್ಸ್‌ಗಳ ಜನವಿರೋಧಿ ಮತ್ತು ಧನದಾಹಿ ಕಪಿಮುಷ್ಠಿಯಲ್ಲಿ ಸಾಲಗಾರರಾಗಿ ಸಿಲುಕಿರುವುದು 76 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರಗಳ ಅಭಿವೃದ್ಧಿ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಜನಸ್ನೇಹಿ, ಜನಾಭಿವೃದ್ಧಿ, ಜನಹಿತ ನೀತಿಗಳನ್ನು ರೂಪಿಸಬೇಕಿದ್ದ ಸರ್ಕಾರಗಳು ಖಾಸಗಿ ಬಂಡವಾಳಶಾಹಿ ಮೈಕ್ರೋ ಫೈನಾನ್ಸ್‌ಗಳ ಷಡ್ಯಂತ್ರಕ್ಕೆ ಮಣಿದು ಮೌನ ಬೆಂಬಲದೊಂದಿಗೆ ಈ ಖಾಸಗಿ ಬಂಡವಾಳ ಶಾಹಿ ಕ್ರೌರ್ಯ ಮೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿವೆ. ಮೈಕ್ರೋ ಫೈನಾನ್ಸ್‌ಗಳ ಉಪಟಳದಿಂದ ಆತ್ಮಹತ್ಯೆ, ಅವಮಾನ, ಕಿರುಕುಳ, ದೌರ್ಜನ್ಯಕ್ಕೆ ಜನರು ಒಳಗಾಗುತ್ತಾ ಊರು-ಕೇರಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲಗಾರ ಕುಟುಂಬಗಳ ಮನೆಗಳು ಜಪ್ತಿಯಾಗಿ ಬೀಗ ಬೀಳುತ್ತಿವೆ. ಈ ಖಾಸಸಗಿ ಸಂಸ್ಥೆಗಳು ಜನಸಾಮಾನ್ಯರ ಬದುಕುವ ಹಕ್ಕು, ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದರೂ ಕೇಂದ್ರ-ರಾಜ್ಯಸರ್ಕಾರಗಳು ನೋಡುತ್ತಾ ಕುಳಿತಿರುವುದನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.

ಆರ್‌ಬಿಐ ನಿಯಮಗಳನ್ನು ಲೆಕ್ಕಿಸದೆ ಸಾಲದ ಶೂಲಕ್ಕೇರಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಕೂಡಲೇ ಬಂದ್ ಮಾಡಿಸಬೇಕು. ದೌರ್ಜನ್ಯ ನಡೆಸಿ ಕಿರುಕುಳ ನೀಡಿದ ಸಂಸ್ಥೆಗಳ ಮಾಲೀಕರು ಮತ್ತು ಸಿಬ್ಬಂದಿಯನ್ನು ಜಾಮೀನು ರಹಿತ ಬಂಧನಕ್ಕೊಳಪಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.

ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ತಲಾ 50 ಲಕ್ಷ ರು. ಪರಿಹಾರ ದೊರಕಿಸಬೇಕು. ಆಯಾ ಫೈನಾನ್ಸ್ ಸಂಸ್ಥೆಗಳಿಂದಲೇ ಪರಿಹಾರ ಹಣವನ್ನು ದೊರಕಿಸುವಂತೆ ಆಗ್ರಹಪಡಿಸಿದರು.

ರಾಜ್ಯ ಮತ್ತು ದೇಶದ ಜನರ ಜೀವ ಮತ್ತು ಮೂಲಭೂತ ಅವಶ್ಯಕತೆಗಳ ಸಂರಕ್ಷಣಾ ಕಾಯ್ದೆ ಜಾರಿ ಮಾಡಲು ಈ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠೀಯಲ್ಲಿ ಕೆ.ಎಂ.ಅನಿಲ್‌ಕುಮಾರ್, ಬಿ.ಆನಂದ್, ಸುಶ್ಮಿತಾ, ಜೆ.ತಿಮ್ಮೇಶ್, ಸುಮಾಮಣಿ, ಎನ್.ಟಿ.ಮುತ್ತುರಾಜು ಇದ್ದರು.