ಸಾರಾಂಶ
ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಂಡು ಮೂರು ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಎ. ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು. 2013ರಲ್ಲಿ 18 ಕೋಟಿ ರು. ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿ 12 ವರ್ಷ ಕಳೆದರೂ ಇನ್ನೂ ಕುಂಟುತ್ತಾ ಸಾಗಿದೆ. ಕಾಮಗಾರಿ ವೆಚ್ಚ 39 ಕೋಟಿ ರು.ಗೆ ಏರಿಕೆಯಾಗಿದೆ, ಸರ್ಕಾರ ಹಣವನ್ನೂ ಬಿಡುಗಡೆಮಾಡಿದೆ. ತ್ಯಾಜ್ಯ ಘಟಕ ನಿರ್ವಹಣೆಗೆ ಅಗತ್ಯ ಜಮೀನು ಗುರುತಿಸಿ ನೋಂದಾಯಿಸಿ ಕೊಟ್ಟಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಳ್ಳದೆ ಪಟ್ಟಣದ ಜನತೆ ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಂಡು ಮೂರು ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಎ. ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡಸಿದ ಅವರು, ತಾವು ಸಚಿವರಾಗಿದ್ದ ವೇಳೆ 2013ರಲ್ಲಿ 18 ಕೋಟಿ ರು. ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿ 12 ವರ್ಷ ಕಳೆದರೂ ಇನ್ನೂ ಕುಂಟುತ್ತಾ ಸಾಗಿದೆ. ಕಾಮಗಾರಿ ವೆಚ್ಚ 39 ಕೋಟಿ ರು.ಗೆ ಏರಿಕೆಯಾಗಿದೆ, ಸರ್ಕಾರ ಹಣವನ್ನೂ ಬಿಡುಗಡೆಮಾಡಿದೆ. ತ್ಯಾಜ್ಯ ಘಟಕ ನಿರ್ವಹಣೆಗೆ ಅಗತ್ಯ ಜಮೀನು ಗುರುತಿಸಿ ನೋಂದಾಯಿಸಿ ಕೊಟ್ಟಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಳ್ಳದೆ ಪಟ್ಟಣದ ಜನತೆ ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಿಗಧಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ ಸರ್ಕಾರಕ್ಕೆ 19 ಕೋಟಿಯಷ್ಟು ಹಣ ಉಳಿಯುತ್ತಿತ್ತು. ಒಂದು ತಿಂಗಳಲ್ಲಿ ಟೆಂಡರ್ ಸೇರಿದಂತೆ ಎಲ್ಲ ಪ್ರಕಿಯೆಗಳು ಪೂರ್ಣಗೊಳ್ಳಬೇಕು. ಮೂರು ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕು. 2025ರ ಅಂತ್ಯದೊಳಗೆ ಪೂರ್ಣಕಾಮಗಾರಿ ಮುಗಿಸಬೇಕು ಎಂದು ಎಇಇ ಮಂಜುನಾಥ್ ಅವರಿಗೆ ಸೂಚಿಸಿದರು. ಈಗಾಗಲೇ ಹಲವು ನ್ಯೂನತೆಗಳಿಂದ ಸಾಕಷ್ಟು ವಿಳಂಬವಾಗಿದೆ, ಮತ್ತೆ ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಎಇಇ ಮಂಜುನಾತ್ ಮಾತನಾಡಿ, ಕಾಮಗಾರಿ ಕುರಿತು ಮಾಹಿತಿ ನೀಡಿ, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದೆ ಪೂರ್ಣಗೊಳಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಹಸೀಲ್ದಾರ್ ಮಲ್ಲಿಕಾರ್ಜುನ್, ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್, ಸದಸ್ಯರಾದ ಅನಿಕೇತನ್, ಹೂವಣ್ಣ, ಕೃಷ್ಣಯ್ಯ, ರಮೇಶ್ ವಾಟಾಳ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಭಾಗವಹಿಸಿದ್ದರು.