ಸಾರಾಂಶ
ಯಲ್ಲಾಪುರ: ಜಗತ್ತಿಗೆ ಅನಂತ ಶಕ್ತಿಯನ್ನು ನೀಡುವ ಸೂರ್ಯನನ್ನು ಸದಾ ಉಪಾಸನೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.ಫೆ. ೪ರಂದು ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಸಭಾಭವನದಲ್ಲಿ ರಥಸಪ್ತಮಿಯ ಅಂಗವಾಗಿ ಪ್ರತಿವರ್ಷದಂತೆ ಪತಂಜಲಿ ಯೋಗ ಸಮಿತಿ ಮತ್ತು ಶಾರದಾಂಬಾ ದೇವಸ್ಥಾನ, ಪಾಠಶಾಲೆಗಳ ಸಹಯೋಗದಲ್ಲಿ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಉಪನಿಷತ್ತುಗಳಲ್ಲಿ ಹೇಳಿರುವಂತೆ ಮೂಲ ಪ್ರಾಣಶಕ್ತಿಗೂ ಸೂರ್ಯನ ಅನುಗ್ರಹ ಅಗತ್ಯ. ಅಲ್ಲದೇ, ಸೂರ್ಯನ ಬೆಳಕಿನಿಂದ ಡಿ ವಿಟಮಿನ್ ನಮಗೆ ಲಭಿಸುತ್ತದೆ. ಆದ್ದರಿಂದ ಸೂರ್ಯ ಅನಂತ ಶಕ್ತಿಗಳ ಖನಿಯಾಗಿದ್ದಾನೆ. ನಮ್ಮ ಆಹಾರಗಳು ಆರೋಗ್ಯಯುಕ್ತವಾಗಿರಲು ಸೂರ್ಯನ ಶಕ್ತಿಯ ಅಗತ್ಯತೆಯಿದೆ. ಅನೇಕ ರೋಗಗಳ ನಿಯಂತ್ರಣಕ್ಕೂ ಸೂರ್ಯನ ಶಕ್ತಿ ತೀರಾ ಮಹತ್ವದ್ದು ಎಂದರು.ಸೂರ್ಯ ಉಪಾಸನೆಯಿಂದ ನಮಗೆ ಪುಣ್ಯದ ಜತೆ ಆರೋಗ್ಯ ವೃದ್ಧಿಯನ್ನು ಪಡೆದುಕೊಳ್ಳಬಹುದು. ಆರೋಗ್ಯವಂತರು ಸೂರ್ಯ ನಮಸ್ಕಾರ ನಿತ್ಯವೂ ಮಾಡುವುದರಿಂದ ಬದುಕಿನುದ್ದಕ್ಕೂ ಆರೋಗ್ಯವಂತರಾಗಿರಬಹುದು. ಅನಾರೋಗ್ಯಕ್ಕೊಳಗಾದವರೂ ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅದರಲ್ಲೂ ಬೆಳಗಿನ ಸೂರ್ಯೋದಯ ಅತ್ಯಂತ ಆರೋಗ್ಯಕ್ಕೆ ಪೂರಕ ವಾತಾವರಣ ನೀಡುತ್ತದೆ ಎಂದರು.
ನಿತ್ಯ ವ್ಯಾಯಾಮ ನಮ್ಮ ಜೀವನದ ಅಂಗವಾಗಬೇಕು. ಅದರಲ್ಲೂ ಸಾಮೂಹಿಕ ಯೋಗ, ಧ್ಯಾನ, ಸೂರ್ಯನಮಸ್ಕಾರಗಳು ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಇದು ಎಲ್ಲ ಮಂದಿರಗಳಲ್ಲೂ ನಡೆಯುವಂತಾಗಬೇಕು. ಆ ದೃಷ್ಟಿಯಲ್ಲಿ ಪತಂಜಲಿ ಯೋಗ ಸಮಿತಿ ಅನೇಕ ವರ್ಷಗಳಿಂದ ಇಂತಹ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ ಎಂದರು.ಪತಂಜಲಿ ಯೋಗ ಸಮಿತಿಯ ಜಿ.ಎಸ್. ಭಟ್ಟ ಹಳವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ. ಭಟ್ಟ, ಮಹಿಳಾ ಪ್ರಭಾರಿಗಳಾದ ಶೈಲಶ್ರೀ ಭಟ್ಟ, ಗಂಗಾ ಭಟ್ಟ, ಸೀಮಾ ಪರಿಷತ್ ನಗರಭಾಗಿ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪತಂಜಲಿ ಸಮಿತಿಯ ನಾಗೇಶ ರಾಯ್ಕರ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.13ರಂದು ಉಳವಿ ಚೆನ್ನಬಸವೇಶ್ವರ ರಥೋತ್ಸವ
ಕಾರವಾರ: ಜೋಯಿಡಾ ತಾಲೂಕಿನ ಉಳವಿಯ ಚೆನ್ನಬಸವೇಶ್ವರ ದೇವರ ರಥೋತ್ಸವ ಫೆ. ೧೩ರಂದು ಸಂಜೆ ೪ ಗಂಟೆಗೆ ನಡೆಯಲಿದ್ದು, ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ರಥ ಪೂಜೆ ಸಲ್ಲಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡುವರು ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರ ಮಾಹಿತಿ ನೀಡಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲಿಸ್ ವರಿಷ್ಠ ಎಂ. ನಾರಾಯಣ, ಉಪ ವಿಭಾಗಾಧಿಕಾರಿ ಕನಿಷ್ಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಶಿಂಧೆ, ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ ಉಪಸ್ಥಿತರಿರುವರು ಎಂದರು.ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಫೆ. ೫ರಂದು ಪಲ್ಲಕ್ಕಿ ಉತ್ಸವ, ೬ರಂದು ಸಂಜೆ ಭೂಮಿಪೂಜೆ, ನವಧಾನ್ಯ ಹಾಕುವುದು, ೭ರಂದು ಹುಂಡಿ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ೮ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿ ಸಣ್ಣ ರಥೋತ್ಸವ, ೯ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, ೧೦ರಂದು ಎತ್ತಿಕಾಯಿ ಬಸವಣ್ಣ ರಥೋತ್ಸವ, ೧೧ರಂದು ದೇವಾನುದೇವತೆಗಳ ಸಣ್ಣ ರಥೋತ್ಸವ, ೧೨ರಂದು ರಾತ್ರ ೮ ಗಂಟೆಗೆ ಚೆನ್ನಬಸವೇಶ್ವರ ರಥಾರೋಹಣ, ೧೩ರಂದು ಮಹಾರಥೋತ್ಸವ, ೧೫ರಂದು ಓಕುಳಿ ಸಣ್ಣ ರಥೋತ್ಸವ ನಡೆಯಲಿದೆ ಎಂದರು.ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಶಾಸ್ತ್ರಿ, ಟ್ರಸ್ಟ್ ಸದಸ್ಯ ವೀರೇಶ ಕಂಬಳಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ ಇದ್ದರು.