ಸಾರಾಂಶ
ಒಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನತೆ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭಯದಲ್ಲಿದ್ದಾರೆ. ಈಗ ಪೌರಕಾರ್ಮಿಕರು ಮುಷ್ಕರದಿಂದ ನಗರ ಸ್ವಚ್ಛತೆಯಾಗದೇ ಕಸ ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆವರಿಸಿದೆ.
ಅಜೀಜಅಹ್ಮದ್ ಬಳಗಾನೂರ
ಹುಬ್ಬಳ್ಳಿ:ಒಂದೆಡೆ ನಿರಂತರ ಸುರಿಯುತ್ತಿರುವ ಮಳೆ, ಮತ್ತೊಂದೆಡೆ ಡೆಂಘೀ ಭೀತಿ. ಇನ್ನೊಂದೆಡೆ ಪೌರಕಾರ್ಮಿಕರ ಅಹೋರಾತ್ರಿ ಧರಣಿಯಿಂದ ಸಕಾಲಕ್ಕೆ ವಿಲೇವಾರಿಯಾಗದ ತ್ಯಾಜ್ಯ.
ನೇರ ವೇತನ ಸೇರಿದಂತೆ 18 ಪ್ರಮುಖ ಬೇಡಿಕೆಗಳ ಈಡೇರಿಕೆಗೆ 7 ದಿನಗಳಿಂದ ನೂರಾರು ಪೌರಕಾರ್ಮಿಕರು ಪಾಲಿಕೆ ಎದುರು ಧರಣಿ ನಡೆಸುತ್ತಿದ್ದಾರೆ. ಇತ್ತ ನಗರದಾದ್ಯಂತ ಸಮರ್ಪಕ ಕಸ ವಿಲೇವಾರಿಯಾಗದೇ ಎಲ್ಲೆಂದರಲ್ಲಿ ಕಸದ ರಾಶಿಯೇ ಬಿದ್ದು ದುರ್ನಾತ ಬೀರುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಮಹಾನಗರ ಪಾಲಿಕೆ ಮೌನ ವಹಿಸಿದೆ. ಇದರಿಂದಾಗಿ 40ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಕಸ ಸಂಗ್ರಹಗೊಂಡು ತೊಟ್ಟಿಗಳೆಲ್ಲ ತುಂಬಿವೆ.ಎಲ್ಲೆಲ್ಲಿ ಸಮಸ್ಯೆ:
ಇಲ್ಲಿನ ಜನತಾ ಬಜಾರ, ದುರ್ಗದಬೈಲ್, ಸಿಬಿಟಿ, ಮಂಗಳವಾರಪೇಟ, ಮೂರು ಸಾವಿರ ಮಠದ ಸುತ್ತಮುತ್ತಲಿನ ಭಾಗ, ಶಹಾ ಬಜಾರ್, ಗಾಂಧಿ ಮಾರ್ಕೆಟ್, ದುರ್ಗದ ಬೈಲ್, ಕೇಶ್ವಾಪುರ, ಕುಸುಗಲ್ಲ ರಸ್ತೆ, ಗೋಪನಕೊಪ್ಪ, ಕೋಪ್ಪಿಕರ್ ರಸ್ತೆ, ನೆಹರು ಮೈದಾನದ ಅಕ್ಕಪಕ್ಕ, ಹಳೇ ಹುಬ್ಬಳ್ಳಿ, ಸ್ಟೇಷನ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ತಾಜ್ಯ ಎಸೆಯಲಾಗುತ್ತಿದೆ.ಪರ್ಯಾಯ ವ್ಯವಸ್ಥೆಯಿಲ್ಲ:
ಜನತಾ ಬಜಾರ, ಶಾಹ ಬಜಾರ, ಹರ್ಷಾ ಕಾಂಪ್ಲೇಸ್, ಗಣೇಶನಗರದ ಮೀನು ಮಾರುಕಟ್ಟೆ ಸೇರಿದಂತೆ ಹಲವೆಡೆ ನಿತ್ಯವೂ ಅಪಾರ ಪ್ರಮಾಣದ ಕಸ ಸಂಗ್ರಹಗೊಳ್ಳುತ್ತಿದೆ. ಇದರ ತೆರವಿಗಾಗಲಿ ಅಥವಾ ವಿಲೇವಾರಿಗೆ ಪಾಲಿಕೆ ಪರ್ಯಾಯ ವ್ಯವಸ್ಥೆ ಕೈಗೊಂಡಿಲ್ಲ. ಧರಣಿಯಿಂದ ಕಸ ಸಂಗ್ರಹಿಸುವ ವಾಹನಗಳು ಬರುತ್ತಿಲ್ಲ. ಹೀಗಾಗಿ ಜನರು ಕಸ ತಂದು ರಸ್ತೆಗೆ ಹಾಕುತ್ತಿದ್ದಾರೆ.ಡೆಂಘೀ ಆತಂಕ ಹೆಚ್ಚಳ:
ಒಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನತೆ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭಯದಲ್ಲಿದ್ದಾರೆ. ಈಗ ಪೌರಕಾರ್ಮಿಕರು ಮುಷ್ಕರದಿಂದ ನಗರ ಸ್ವಚ್ಛತೆಯಾಗದೇ ಕಸ ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆವರಿಸಿದೆ.ಏತಕ್ಕಾಗಿ ಪೌರಕಾರ್ಮಿಕರ ಧರಣಿ:
ಪಾಲಿಕೆಯಲ್ಲಿ 360 ಜನರು ಕಾಯಂಮಾತಿ ಪಡೆದಿದ್ದರೆ, 1001 ಪೌರಕಾರ್ಮಿಕರು ನೇರಪಾವತಿ, 799 ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ 8 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೇರವೇತನ ನೀಡುವುದು, 386 ಜನರನ್ನು ನೇರನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಲಾಗಿದೆ. 2023ರ ಅಕ್ಟೋಬರ್ 30ರಂದು ಪಾಲಿಕೆಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸುವಂತೆ ಠರಾವು ಪಾಸ್ ಮಾಡಲಾಗಿದೆ. ಆದರೆ ಸರ್ಕಾರದಿಂದ ಅನುಮೋದನೆ ಪಡೆಯುವ ಕಾರ್ಯ ಇಂದಿಗೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ನೇರನೇಮಕಾತಿ, ನೇರವೇತನ ಸೇರಿದಂತೆ ಪ್ರಮುಖ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ.ಬೇಡಿಕೆ ಈಡೇರುವರೆಗೂ ಹೋರಾಟ ನಿಲ್ಲದು. ಪಾಲಿಕೆ ಅಧಿಕಾರಿಗಳು 2 ದಿನಗಳಲ್ಲಿ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಪೌರಕಾರ್ಮಿಕರು ಕೆಲಸ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಪಜಾ, ಪಪಂ ಪೌರಕಾರ್ಮಿಕ ಮತ್ತು ನೌಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಹೇಳಿದ್ದಾರೆ.ಕಳೆದೊಂದು ವಾರದಿಂದ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಒಂದು ಬಾರಿ ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಲಾಗಿದೆ. ಆದಷ್ಟು ಬೇಗನೆ ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.