ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಕರ್ನಾಟಕ ಉಪಲೋಕಾಯುಕ್ತ ಬಿ.ವೀರಪ್ಪ ಅವರು ನೆಲಮಂಗಲ ತಾಲೂಕಿನ ವಿವಿಧ ಕಚೇರಿಗಳು, ಆಸ್ಪತ್ರೆ, ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಆಸ್ಪತ್ರೆಯ ಸ್ವಚ್ಚತೆಯನ್ನು ಕಂಡು ಖುಷಿಪಟ್ಟರು. ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಿದ ನಂತರ ಔಷಧಿ ವಿತರಿಸುವ ಕೊಠಡಿಗೆ ಭೇಟಿ ನೀಡಿ ಮಾತ್ರೆ, ಸಿರೀಫ್ ಗಳ ಬಗ್ಗೆ ಮಾಹಿತಿ ಪಡೆದು ಯಾವುದೇ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿ ಡಾ.ಸಂಧ್ಯಾ ಅವರಿಗೆ ತಿಳಿಸಿದರು. ಇನ್ನೂ ರೋಗಿಗಳು ಕುಳಿತುಕೊಳ್ಳುವ ಆವರಣವನ್ನು ಮತ್ತಷ್ಟು ವಿಸ್ತರಿಸಬೇಕು. ಇನ್ನಷ್ಟು ಚೇರುಗಳನ್ನು ವ್ಯವಸ್ಥೆ ಮಾಡಬೇಕೆಂದು ತಿಳಿಸಿದ ಅವರು ಅಲ್ಲೇ ಇದ್ದ ರೋಗಿಗಳ ಬಳಿ ಹೋಗಿ ವೈದ್ಯರು, ಸಿಬ್ಬಂದಿಗಳು ಚಿಕಿತ್ಸೆ ನೀಡಲು ಹಣ ಪಡೆಯುತ್ತಾರಾ ಇಲ್ಲವಾ ಹೇಗೆ ಚಿಕಿತ್ಸೆ ನೀಡುತ್ತಾರೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಅಪಘಾತಕ್ಕೆ ಕಡಿವಾಣ ಹಾಕಿ : ಇನ್ನೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಇತ್ತೀಚಿಗೆ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಹಾಗೂ ಕಳ್ಳತ, ಹಲ್ಲೆ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಇವುಗಳಿಗೆ ಮಟ್ಟಹಾಕಬೇಕು. ಅಪಘಾತಗಳು ಸಂಭವಿಸದಂತೆ ಕ್ರಮವಹಿಸಬೇಕೆಂದು ಇನ್ಸ್ ಪೆಕ್ಟರ್ ರವಿ ಅವರಿಗೆ ತಿಳಿಸಿದರು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರು, ದೂರುದಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಅಪರಾಧ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕು. ಬಾಕಿ ಇರುವ ದೂರುಗಳ ಬಗ್ಗೆ ಶೀಘ್ರ ಕ್ರಮವಹಿಸಿ ಇತ್ಯರ್ಥ ಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ನೆಲಮಂಗಲ ಪಟ್ಟಣದ ಸಬ್ ರಿಜೆಸ್ಟರ್ ಕಚೇರಿ, ನಗರಸಭೆ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.