ಶರಣ ತತ್ವ ಅಳವಡಿಸಿಕೊಂಡು ಲಿಂಗಾಯತ ಧರ್ಮ ಎತ್ತಿ ಹಿಡಿಯಿರಿ: ಶ್ರೀ ಸಿದ್ದಮಲ್ಲ ಸ್ವಾಮೀಜಿ

| Published : Nov 17 2024, 01:16 AM IST

ಶರಣ ತತ್ವ ಅಳವಡಿಸಿಕೊಂಡು ಲಿಂಗಾಯತ ಧರ್ಮ ಎತ್ತಿ ಹಿಡಿಯಿರಿ: ಶ್ರೀ ಸಿದ್ದಮಲ್ಲ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ವೈಷ್ಣವ ಮತ್ತು ಶೈವ ಧರ್ಮ ಎಂಬುದಿತ್ತು. ವಿಷ್ಣುವನ್ನು ಪೂಜಿಸುವ ವೈಷ್ಣವರು, ಶಿವನನ್ನು ಪೂಜಿಸುವ ಶೈವರಿದ್ದರು. ಇಂತಹ ಶೈವರಲ್ಲಿ ವೀರಶೈವ ಎಂಬ ಪದ ಹುಟ್ಟಿಕೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರುಇಂದು ಎಲ್ಲರೂ ವಚನಗಳನ್ನು ಮತ್ತೆ ಮನನ ಮಾಡಬೇಕಿದೆ. ಶರಣ ತತ್ವವನ್ನು ಅಳವಡಿಸಿಕೊಂಡು ಲಿಂಗಾಯತ ಧರ್ಮವನ್ನು ಎತ್ತಿ ಹಿಡಿಯಬೇಕಿದೆ ಎಂದು ಮೈಸೂರಿನ ಶ್ರೀ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ ತಿಳಿಸಿದರು.ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಗೌರಿಶಂಕರನಗರದ ಪಂಚಗವಿ ಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ಶನಿವಾರ ಆಯೋಜಿಸಿದ್ದ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆಯ ಕಮ್ಮಟವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಶರಣರೇ ಹೇಳಿದಂತೆ ಅಂದು ಎರಡೆಂಬತ್ತು ಕೋಟಿ ವಚನಗಳಿದ್ದವು. ಆದರೆ, ಇಂದು ಸರ್ಕಾರ ಮುದ್ರಿಸಿದ 2 ಪುಸ್ತಕಗಳಿಗೆ ಸೀಮೀತವಾಗಿದೆ. ಕಲ್ಯಾಣದ ಕ್ರಾಂತಿಯ ಬಳಿಕ ಹಲವು ವಚನಗಳನ್ನು ಸೈನಿಕರು ಸುಟ್ಟು ಹಾಕಿದರು. ನಾವು ವಚನದ ಹಾದಿಯನ್ನು ಕಳೆದುಕೊಳ್ಳುವಂತಾಯಿತು ಎಂದರು.ಭಾರತದಲ್ಲಿನ ವರ್ಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರರು ಎನಿಸಿಕೊಂಡವರೇ ಇಂದು ಲಿಂಗಾಯತರಾಗಿರುವುದು. ಈ ವರ್ಣಾಶ್ರಮ ವ್ಯವಸ್ಥೆಯು ಎಂದೂ ನಾಶವಾಗುವುದಿಲ್ಲ. ವ್ಯವಸ್ಥಿತವಾಗಿ ಮರಳಿ ಬರಲು ಸಂಚು ನಡೆಸುತ್ತಲೇ ಇರುತ್ತದೆ. ಇಂತಹ ವ್ಯವಸ್ಥೆಗೆ ವಿರುದ್ಧವಾಗಿ ಬಂದ ಬಸವಣ್ಣ ಅವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಮಹಿಳೆಯರಿಗೆ, ಪುರುಷರಿಗೆ ಸರ್ವ ಸಮಾನತೆ ನೀಡಿದರು. ವಚನಗಳ ಅನುಸರಣೆಯಿಂದ ನಿಜವಾದ ಲಿಂಗಾಯತರಾಗುತ್ತೀರಿ. ಶರಣ ತತ್ವವುಳ್ಳ ಲಿಂಗಾಯತ ಧರ್ಮವನ್ನು ಜಗತ್ತಿಗೆ ಪ್ರಸಾರ ಮಾಡಬೇಕಿದೆ ಎಂದು ಅವರು ಹೇಳಿದರು.ಭಾರತದಲ್ಲಿ ವೈಷ್ಣವ ಮತ್ತು ಶೈವ ಧರ್ಮ ಎಂಬುದಿತ್ತು. ವಿಷ್ಣುವನ್ನು ಪೂಜಿಸುವ ವೈಷ್ಣವರು, ಶಿವನನ್ನು ಪೂಜಿಸುವ ಶೈವರಿದ್ದರು. ಇಂತಹ ಶೈವರಲ್ಲಿ ವೀರಶೈವ ಎಂಬ ಪದ ಹುಟ್ಟಿಕೊಂಡಿತು. ಈ ರೀತಿ ಹುಟ್ಟಿದ ವೀರಶೈವ ಎಷ್ಟೇ ಪ್ರಯತ್ನಪಟ್ಟರೂ ಸ್ವತಂತ್ರ ಧರ್ಮವಾಗಲಿಲ್ಲ. ಅವರು ಬುದ್ಧಿವಂತರಾಗಿದ್ದರೆ ಲಿಂಗಾಯತ ಧರ್ಮಕ್ಕಾದರೂ ಪ್ರೋತ್ಸಾಹ ನೀಡಬಹುದಿತ್ತು ಎಂದರು.ಲಿಂಗಾಯತ ಧರ್ಮಕ್ಕೆ ಬಂದ ವೀರಶೈವರು ವಚನಗಳಲ್ಲೂ ಪ್ರಕ್ಷುಬ್ಧ ವಚನಗಳನ್ನು ಸೇರಿಸಿದ್ದಾರೆ. ಮೈಸೂರು ಅರಮನೆಯಲ್ಲಿದ್ದ ಲಿಂಗ ಪುರಾಣ ಎಂಬ ಗ್ರಂಥದ ಮರು ಮುದ್ರಣದಲ್ಲಿ 4 ಶ್ಲೋಕಗಳನ್ನು ವೀರಶೈವದ ಪರವಾಗಿ ಸೇರಿಸಲಾಗಿದೆ. ಇಂತಹ ಹಲವು ಕೆಲಸಗಳು ನಡೆದಿವೆ. ಶರಣರ ನೈಜ ವಚನಗಳ ಸಂರಕ್ಷಣೆ ಮತ್ತು ಅಳವಡಿಕೆ ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಅವರು ಹೇಳಿದರು.ನಂತರ ಪಿ. ರುದ್ರಪ್ಪ, ಎಂ.ಎಂ. ಸಂಗೊಳ್ಳಿ ಮತ್ತು ಎಸ್.ಎನ್. ಅರಭಾವಿ ಅವರು ವಿಚಾರ ಮಂಡಿಸಿದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಸಭಾದ ಜಿಲ್ಲಾಧ್ಯಕ್ಷ ಮಹಾದೇವಪ್ಪ, ಕಾರ್ಯದರ್ಶಿ ಬಿ.ಎಂ. ಮರಪ್ಪ, ಶಿವಮಲ್ಲಪ್ಪ ಮೊದಲಾದವರು ಇದ್ದರು.