ಹಿಂದುಗಳ ಮಠ, ಮಂದಿರಗಳ ಆಸ್ತಿ ರಕ್ಷಣೆಗೆ ಒತ್ತಾಯ

| Published : Nov 17 2024, 01:16 AM IST

ಸಾರಾಂಶ

ದಾವಣಗೆರೆ: ವಕ್ಫ್ ಮಂಡಳಿಯು ರೈತರು, ಮಠ ಮಂದಿರ, ರೈತರು, ಜನರ ಆಸ್ತಿ, ಜಮೀನುಗಳನ್ನು ತನ್ನ ವಶಕ್ಕೆ ಪಡೆಯಬಹುದಾಗಿದ್ದು, ನಮ್ಮ ಜಮೀನು ವಕ್ಫ್ ನ್ಯಾಯ ಮಂಡಳಿಗೆ ಹೋದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್‌ ಅಶೋಕ ಹಾರನಹಳ್ಳಿ ಕಳವಳ ವ್ಯಕ್ತಪಡಿಸಿದರು.

ದಾವಣಗೆರೆ: ವಕ್ಫ್ ಮಂಡಳಿಯು ರೈತರು, ಮಠ ಮಂದಿರ, ರೈತರು, ಜನರ ಆಸ್ತಿ, ಜಮೀನುಗಳನ್ನು ತನ್ನ ವಶಕ್ಕೆ ಪಡೆಯಬಹುದಾಗಿದ್ದು, ನಮ್ಮ ಜಮೀನು ವಕ್ಫ್ ನ್ಯಾಯ ಮಂಡಳಿಗೆ ಹೋದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್‌ ಅಶೋಕ ಹಾರನಹಳ್ಳಿ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಅನೇಕ ಕಡೆ ವಕ್ಫ್ ನೋಟಿಸ್‌ ನೀಡಿದ್ದು, ನಿನ್ನೆಯಷ್ಟೇ ಚಿಂತಾಮಣಿ ತಾಲೂಕಿನಲ್ಲಿ ರೈತರ ಜಮೀನು ವಶಕ್ಕೆ ಪಡೆಯಲು ಟ್ರ್ಯಾಕ್ಟರ್ ಜಪ್ತು ಮಾಡಲಾಗಿದೆ. ಹೀಗೆ ಸಾಕಷ್ಟು ಘಟನೆಗಳು ಕಣ್ಣ ಮುಂದಿವೆ ಎಂದರು.

ರೈತರು, ಮಠ ಮಂದಿರಗಳು, ಜನರ ಆಸ್ತಿ, ಜಮೀನುಗಳನ್ನು ವಕ್ಫ್ ತನ್ನ ವಶಕ್ಕೆ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಆತಂಕದ ಸಂಗತಿ. ವಕ್ಫ್‌ಗೆ ಹೀಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಹಿಂದು ದೇವಸ್ಥಾನಗಳ ರಕ್ಷಣೆಗೆ ಯಾವ ನ್ಯಾಯ ಮಂಡಳಿಯೂ ಇಲ್ಲ. ಅರ್ಚಕರಿಗೆ ಕನಿಷ್ಠ ವೇತನವೂ ಇಲ್ಲ. ಇಂತಹ ಹತ್ತಾರು ಸಮಸ್ಯೆಗಳಿವೆ. ಮುಜರಾಯಿ ದೇವಸ್ಥಾನಗಳಲ್ಲಿ ಸಮಗ್ರ ಬದಲಾವಣೆ ತರಬೇಕಿದೆ ಎಂದು ತಿಳಿಸಿದರು.

ದುರಂತವೆಂದರೆ ಹಿಂದು ದೇವಸ್ಥಾನಗಳಿಗೆ ಸ್ವತಂತ್ರ್ಯ ನೀಡಿಲ್ಲ. ನಮ್ಮ ಜಮೀನು ಕಸಿದುಕೊಳ್ಳುವ ವಕ್ಫ್ ಮಂಡಳಿ ವಿರುದ್ಧ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ. ದೇವಾಲಯಗಳು ಸ್ವತ ಸ್ವಾತಂತ್ರವಾಗಿ ನಡೆಯುವ ಬಗ್ಗೆ ಆಲೋಚನೆ ಮಾಡಬೇಕಿದೆ. ಮುಖ್ಯವಾಗಿ ಮುಜರಾಯಿ ದೇವಸ್ಥಾನಗಳ ಆದಾಯ ಬೇರೆಡೆ ಬಳಕೆಯಾಗಬಾರದು. ದೇವಾಲಯಗಳ ಅಭಿವೃದ್ಧಿಗೆ ಅದು ಹಣ ಬಳಕೆಯಾಗಬೇಕು. ಹಿಂದು ದೇವಾಲಯಗಳಿಂದ ಬರುವ ಹಣವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ದೇವಾಲಯಗಳು‌ ಹಿಂದೂ ಧರ್ಮದ ಜನರಿಗೆ ತಿಳಿವಳಿಕೆ ನೀಡುವ ಕೇಂದ್ರವಾಗಬೇಕು. ಆದರೆ, ಹಿಂದೂ‌ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಸಂಘಟಿಸಲು ಸರ್ಕಾರವು ಅನುಮತಿ ನೀಡುತ್ತಿಲ್ಲ. ಸಹಕಾರಿ ಕಾಯ್ದೆ ವ್ಯವಸ್ಥೆಯನ್ನು ದೇವಸ್ಥಾನಗಳಿಗೂ ಅನ್ವಯಿಸಿ, ದೇವಸ್ಥಾನಗಳಿಗೆ ಬರುವ ಹಣವನ್ನು ಅವುಗಳ ಅಭಿವೃದ್ಧಿ, ನಿರ್ವಹಣೆ ಮಾತ್ರ ವಿನಿಯೋಗಿಸುವ ಕಾನೂನು ತರಬೇಕೆಂದು ಆಗ್ರಹಿಸಿದರು. ವಕ್ಫ್ ಬೋರ್ಡ್ ಮಠ ಮಾನ್ಯಗಳು, ದೇವಾಲಯಗಳ ಜಮೀನು ವಕ್ಫ್‌ಗೆ ಸೇರಿದ್ದು ಅಂತಾ ಒಂದು ನೋಟಿಸ್ ಕೊಟ್ಟರೂ ಸಾಕು, ಅವೆಲ್ಲಾ ವಕ್ಫ್‌ ಆಸ್ತಿಯೆಂದು ಘೋಷಣೆ ಆಗುತ್ತದೆ. ಇದೇ ಮಾದರಿಯಲ್ಲಿ ದೇವಾಲಯಗಳಿಗೂ ಸ್ವತಂತ್ರ್ಯ ವ್ಯವಸ್ಥೆ, ಅಧಿಕಾರವನ್ನು ಸರ್ಕಾರ ನೀಡಬೇಕು ಎಂದರು.

ಎ ಶ್ರೇಣಿ ದೇವಸ್ಥಾನಗಳಿಂದ ಬಂದ ಹಣವನ್ನು ಸಿ ಮತ್ತು ಡಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ದೇವಸ್ಥಾನಗಳ ನಿರ್ವಹಣೆ ಮತ್ತು ಅಭಿವೃದ್ಧಿ ಹೊರತುಪಡಿಸಿ ಮತ್ತೆ ಇನ್ಯಾವುದೇ ಕಾರ್ಯಗಳಿಗೂ ಸರ್ಕಾರವು ದೇವಾಲಯಗಳ ಹಣ ಉಪಯೋಗ ಮಾಡಬಾರದು. ಇಡಬ್ಲ್ಯೂಎಸ್ ಮೀಸಲಾತಿಯನ್ನು ಸರ್ಕಾರ ಅನುಷ್ಠನಕ್ಕೆ ತಂದಿಲ್ಲ. ಕೇಂದ್ರ ಸರ್ಕಾರದಲ್ಲಿ ಇಡಬ್ಲ್ಯುಎಸ್‌ ಮೀಸಲಾತಿ ಜಾರಿಯಾಗಿದೆ. ಆದರೆ, ನಮ್ಮ ರಾಜ್ಯದಲ್ಲೇ ಅಂತಹ ಮೀಸಲಾತಿ ಇಲ್ಲ. ಈ ಬಗ್ಗೆ ನಾವು ಶೀಘ್ರವೇ ಹೈಕೋರ್ಟ್ ಮೊರೆ ಹೊಗುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಸಗೋಡು ಜಯಸಿಂಹ, ಡಾ.ಶಶಿಕಾಂ, ವಿ.ಎಸ್‌.ನಾಯಕ್, ವೈ.ಎ.ಸುಧಾಕರ ಬಾಬು, ಬಿಳಿಚೋಡು ಶಾಮರಾವ್‌, ಕಾರ್ತಿಕ್ ಎಸ್.ಬಾಪಟ್‌, ಡಾ.ಬಿ.ಟಿ.ಅಚ್ಯುತ್‌, ಅನಿಲ್ ಬಾರೆಂಗಳ್‌, ಕಾಂಗ್ರೆಸ್ ಮುಖಂಡ ಡಿ.ಬಸವರಾಜ ಇತರರು ಇದ್ದರು.

ಡಾ.ಪ್ರಭಂಜನಾಚಾರ್ಯರಿಗೆ ಕನಕ ಶ್ರೀ ಪ್ರಶಸ್ತಿಕರ್ನಾಟಕ ಸರ್ಕಾರ ಪ್ರಸಕ್ತ ಸಾಲಿನ ಕನಕ ಶ್ರೀ ಪ್ರಶಸ್ತಿಯನ್ನು ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಕೊಟ್ಟಿರುವುದು ಸ್ವಾಗತಾರ್ಹ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಮತ್ತು ಕನ್ನಡ ಸಂಸ್ಕೃತಿ ಸಚಿವರಿಗೆ ಇಡೀ ಬ್ರಾಹ್ಮಣ ಸಮಾಜದಿಂದ ಅಭಿನಂದನೆ. ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸಹಕರಿಸಿದ ಮಾಜಿ ಸಚಿವ ಎಚ್.ಎಂ.ರೇವಣ್ಣನವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.

- ಅಸಗೋಡು ಜಯಸಿಂಹ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ.

ಜ.18ರಿಂದ ಎರಡು ದಿನ ಬೆಂಗಳೂರಲ್ಲಿ ಬ್ರಾಹ್ಮಣ ಮಹಾ ಸಮ್ಮೇಳನಕನ್ನಡಪ್ರಭ ವಾರ್ತೆ, ದಾವಣಗೆರೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೇ ಸುವರ್ಣ ಸಂಭ್ರಮ, ಬ್ರಾಹ್ಮಣ ಮಹಾ ಸಮ್ಮೇಳನ ವಿಶ್ವಾಮಿತ್ರ ಸಮಾರಂಭ‍ವು ಬೆಂಗಳೂರಿನ ತ್ರಿಪುರವಾಸಿನಿ ಸಭಾಂಗಣದಲ್ಲಿ ಜನವರಿ 18 ಮತ್ತು 19ರಂದು ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್‌ ಅಶೋಕ ಹಾರನಹಳ್ಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.18ರ ಬೆಳಿಗ್ಗೆ 7ಕ್ಕೆ ಸಮ್ಮೇಳನದ ಧ್ವಜಾರೋಹಣ ನಡೆಯಲಿದ್ದು, 8ಕ್ಕೆ ಲಕ್ಷ ಗಾಯತ್ರಿ ಹೋಮ ಪೂರ್ಣಾಹುತಿ ಜರುಗಲಿದೆ. ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ನಿಮಿತ್ತ ಗೌರವ ಸಮರ್ಪಣೆ, ಆಶೀರ್ವಚನವಿದೆ ಎಂದರು. ಅದೇ ದಿನ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಕೇಂದ್ರ, ರಾಜ್ಯ ಸಚಿವರು, ಶಾಸಕರು, ನಾಡಿನ ವಿಪ್ರರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30ರಿಂದ 3.30 ರವರೆಗೆ ವಿಚಾರಗೋಷ್ಠಿಗಳು, 3ರಿಂದ ವಿಪ್ರ ಸಾಧಕರಿಗೆ ಸನ್ಮಾನವು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಸಾನಿಧ್ಯದಲ್ಲಿ ನಡೆಯಲಿದೆ. ನಂತರ ಸಂಜೆ 5.30ರಿಂದ ರಾತ್ರಿ 9.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ಜ.19ರ ಬೆಳಿಗ್ಗೆ 7ರಿಂದ 8ರವರೆಗೆ ವೇದ ಪಾರಾಯಣ, ಬೆಳಿಗ್ಗೆ 8.30ರಿಂದ 10ರವರೆಗೆ ಸಾಂಸ್ಕೃತಿಕ ಕಲರವ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಧರ್ಮಸಭೆ ಜರುಗಲಿದೆ. ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಮಧ್ಯಾಹ್ನ 12ರಿಂದ 2ರವರೆಗೆ ಅಗ್ನಿಹೋತ್ರಿಗಳಿಗೆ, ವಿಪ್ರ ಸಮುದಾಯದ ಮುಖಂಡರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಮಧ್ಯಾಹ್ನ 2ರಿಂದ 4ರವರೆಗೆ ವಿಚಾರಗೋಷ್ಠಿ ಇವೆ. ಮಧ್ಯಾಹ್ನ 3ರಿಂದ 5.30ರವರೆಗೆ ಕೇಂದ್ರ ಹಾಗೂ ರಾಜ್ಯ ಮಂತ್ರಿಗಳು, ಸಚಿವರು, ಶಾಸಕರು ಹಾಗೂ ನಾಡಿನ ವಿಪ್ರ ನೇತಾರರು ಭಾಗವಹಿಸುವರು. ಸಂಜೆ 5.30ರಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಶ್ರೀ ಮಧುಸೂದನಂದಾಪುರಿ ಸ್ವಾಮೀಜಿ, ಗುರುದತ್ತಮೂರ್ತಿ ಚಕ್ರವರ್ತಿ, ವಿಶ್ವನಾಥ ಚಕ್ರವರ್ತಿ ಇತರರು ಸಮಾರೋಪದಲ್ಲಿ ಭಾಗವಹಿಸುವರು ಎಂದರು.